ಜಪಾನ್ ನ ಟೋಕಿಯೊದಲ್ಲಿ 4 ಕಂಪನಿಗಳೊಂದಿಗೆ ಸಚಿವ ಎಂ.ಬಿ.ಪಾಟೀಲ್ ಮಾತುಕತೆ

ಬೆಂಗಳೂರು : ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದೊಂದಿಗೆ ಜಪಾನ್ ಪ್ರವಾಸದಲ್ಲಿ ಇರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಗುರುವಾರದಂದು ಸೀರೆನ್, ಸಕ್ರಾ ವಲ್ರ್ಡ್ ಹಾಸ್ಪಿಟಲ್, ಮಕಿನೊ ಮತ್ತು ಎನೊಮೊಟೊ ಕಂಪನಿಗಳೊಂದಿಗೆ ಟೋಕಿಯೊದಲ್ಲಿ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ನೆಲೆಯೂರಿರುವ ಕಂಪನಿಗಳೊಂದಿಗೆ ಅವುಗಳ ವಿಸ್ತರಣೆ ಕುರಿತು ಚರ್ಚಿಸಲಾಗಿದೆ. ಮೈಸೂರಿನ ಕಡಕೋಳದಲ್ಲಿ ಆಟೋಮೋಟೀವ್ ಟೆಕ್ಸ್-ಟೈಲ್ಸ್ ತಯಾರಿಕಾ ಘಟಕ ಹೊಂದಿರುವ ಸೀರೆನ್ ಕಂಪನಿಗೆ ಟೊಯೋಟಾ ಕಂಪನಿ ಮುಖ್ಯ ಗ್ರಾಹಕ ಸ್ಥಾನದಲ್ಲಿದೆ. ಇದರ ಜತೆಗೆ ಸೀರನ್ ಕಂಪನಿ ಒಇಎಂ ಸ್ತರದ ಕಂಪನಿಗಳಿಗೆ ತನ್ನ ಉತ್ಪನ್ನಗಳನ್ನು ತಲುಪಿಸಬೇಕು ಎಂದು ಹೇಳಲಾಗಿದೆ. ಈ ಮೂಲಕ ಮಾರುಕಟ್ಟೆ ವಿಸ್ತರಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಪ್ರಿಸಿಷನ್ ಕನೆಕ್ಟರ್ ಬಿಡಿ ಭಾಗಗಳು ಮತ್ತು ಸೆಮಿಕಂಡಕ್ಟರ್ ಲೆಡ್ ಫ್ರೇಮ್ ತಯಾರಿಕೆಗೆ ಹೆಸರಾಗಿರುವ ಎನೊಮೊಟೊ ಕಂಪನಿಯು ರಾಜ್ಯದಲ್ಲಿ ನೆಲೆಯೂರಲು ಆಸಕ್ತಿ ವ್ಯಕ್ತಪಡಿಸಿದೆ. ಈ ಕಂಪನಿಯು ಪ್ರಿಸಿಷನ್ ಸ್ಟಾಂಪಿಂಗ್, ಎಲೆಕ್ಟ್ರೋಪ್ಲೇಟಿಂಗ್, ರೆಸಿನ್ ಮೌಲ್ಡಿಂಗ್ ಮತ್ತು ಹೈ-ಅಕ್ಯುರೆಸಿ ಡೈ ತಯಾರಿಕೆಯಲ್ಲಿ ಕೂಡ ಮುಂಚೂಣಿಯಲ್ಲಿದೆ. ಕಂಪನಿಯು ಭಾರತದಲ್ಲಿ ಲೆಡ್-ಫ್ರೇಮ್ ತಯಾರಿಕೆಗೆ ಸಂಬಂಧಿಸಿದಂತೆ ಟಾಟಾ ಎಲೆಕ್ಟ್ರಾನಿಕ್ಸ್ ಜತೆ ಈ ವರ್ಷ ಒಡಂಬಡಿಕೆ ಮಾಡಿಕೊಂಡಿದೆ. ಭಾರತದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಕರ್ನಾಟಕವೇ ಸೂಕ್ತವೆಂದು ಕಂಪನಿ ಅರಿತಿದೆ. ಇದಕ್ಕೆ ತುಮಕೂರು ಮಶೀನ್ ಟೂಲ್ ಪಾರ್ಕ್ ಪ್ರದೇಶ ಮತ್ತು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಸೂಕ್ತವೆಂದು ತಿಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಸಾಕ್ರಾ ವಲ್ರ್ಡ್ ಹಾಸ್ಪಿಟಲ್ ಈಗಾಗಲೇ ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೊಂದಿದೆ. ಕಿರ್ಲೋಸ್ಕರ್ ಗ್ರೂಪ್, ಸೆಕೋಂ ಮೆಡಿಕಲ್ ಸಿಸ್ಟಂ ಮತ್ತು ಟೊಯೊಟಾ ತುಶೋ ಕಾರ್ಪೊರೇ ಷನ್ ಇದರಲ್ಲಿ ಸಹಭಾಗಿತ್ವ ಹೊಂದಿವೆ. ಸಾಕ್ರಾ ಆಸ್ಪತ್ರೆಯ ಯಶಸ್ಸಿನ ಹಿನ್ನೆಲೆಯಲ್ಲಿ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಹಭಾಗಿತ್ವಕ್ಕೆ ಕಂಪನಿಗಳು ಒಲವು ಹೊಂದಿವೆ. ಇವುಗಳ ಭವಿಷ್ಯದ ಯೋಜನೆಗಳಿಗೆ ರಾಜ್ಯ ಸರಕಾರದ ಪರವಾಗಿ ಸಂಪೂರ್ಣ ಸಹಕಾರದ ಭರವಸೆ ನೀಡಲಾಗಿದೆ ಎಂದು ಎಂ.ಬಿ.ಪಾಟೀಲ್ ನುಡಿದಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಮಕಿನೋ ಕಂಪನಿಯು ಹೈ-ಪ್ರಿಸಿಷನ್ ಮಶೀನ್ ಟೂಲ್ ತಯಾರಿಕೆಗೆ ಪ್ರಸಿದ್ಧವಾಗಿದೆ. ಸ್ಥಳೀಯವಾಗಿಯೇ ತಯಾರಿಕಾ ಚಟುವಟಿಕೆ ಕೈಗೆತ್ತಿಕೊಳ್ಳುವ ಕಂಪನಿಯ ಚಿಂತನೆಯನ್ನು ನಾವು ಸ್ವಾಗತಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಾತುಕತೆಗಳಲ್ಲಿ ಸಿರೆನ್ ಕಂಪನಿಯ ಉನ್ನತಾಧಿಕಾರಿಗಳಾದ ಝುಮಿ ಟೊಮೊಚಿರೊ, ಮತ್ಸುರಾ ಮುನೆಯೂಕಿ, ಎನೊಮೊಟೊ ಕಂಪನಿಯ ಒಗಾವ ಹಿದಿಯೊ, ಕುಕಿ ಯೋಶಿನೋರಿ, ಸಾಕ್ರಾದ ತಕಾಶಿ ಮಾಕಿ, ನವೋಯ ಮತ್ಸುಮಿ, ಮಕಿನೋ ಕಂಪನಿಯ ಕುಸಬಾ ಸೋಬುಹಿಟೊ ಮತ್ತು ನಕ್ಸುಮ ಶೋಗೊ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯಲ್ ಉಪಸ್ಥಿತರಿದ್ದರು.






