ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಶಕ್ತಿ ವಿರೋಧ ಪಕ್ಷಗಳಿಗಿಲ್ಲ, ನಮ್ಮ ಸರ್ಕಾರ ಸುಭದ್ರ: ಸಚಿವ ನರೇಂದ್ರಸ್ವಾಮಿ

ಧಾರವಾಡ : ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಶಕ್ತಿ ವಿರೋಧ ಪಕ್ಷಗಳಿಗಿಲ್ಲ, ನಮ್ಮ ಸರ್ಕಾರ ಸುಭದ್ರವಾಗಿದ್ದು, ಅಲುಗಾಡುವ ಸ್ಥಿತಿಯಲ್ಲಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜಿ.ಟಿ. ದೇವೇಗೌಡ ಹಾಗೂ ಎಂ. ಕೃಷ್ಣಪ್ಪ ಅವರಿಗೆ ₹500 ಕೋಟಿ ಆಫರ್ ನೀಡಿದ್ದಾರೆ ಎಂಬ ಆರೋಪಕ್ಕೆ ಯಾವ ಆಧಾರವಿದೆ? ನಮಗೇನು ಆಪರೇಷನ್ ಕಮಲದ ಅವಶ್ಯಕತೆಯಿದೆಯೇ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ವಿರೋಧ ಪಕ್ಷಗಳನ್ನು ಪ್ರಶ್ನಿಸಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ಜನರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಮನ್ ಕಿ ಬಾತ್ ನಲ್ಲಿ ತಮಗೆ ಬೇಕಾದವರೊಂದಿಗೆ ಮಾತನಾಡುತ್ತಾರೆ. ಪ್ರಧಾನಮಂತ್ರಿಗಳು ಜನರ ಮುಂದೆ ಬಂದು ಪ್ರಶ್ನೆಗಳಿಗೆ ಉತ್ತರಿಸುವುದೇ ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ ಮೋದಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಒಂದೇ ಒಂದು ಸುಳ್ಳು ಹೇಳಿಲ್ಲ. ಸುಳ್ಳು ಹೇಳುವುದನ್ನೇ ರೂಢಿಸಿಕೊಂಡಿರುವವರು ಬಿಜೆಪಿ ನಾಯಕರು. ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ದೇಶದ ಅಭಿವೃದ್ಧಿ ಮಾಡಿದ್ದೇನು? ಕಾಂಗ್ರೆಸ್ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನೇ ತನ್ನ ಸಾಧನೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಎಸ್‌ಐಆರ್ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ಎಸ್‌ಐಆರ್ ವಿರುದ್ಧ ಮಾತನಾಡುತ್ತಿದ್ದಾರೆ. ನಾವು ಪ್ರಶ್ನಿಸಿದರೆ ತಪ್ಪು, ಬಿಜೆಪಿ ಮುಖ್ಯಮಂತ್ರಿಯೇ ಪ್ರಶ್ನಿಸಿದರೆ ಸರಿಯೇ? ಇದಕ್ಕೆ ಬಿಜೆಪಿ ಉತ್ತರಿಸಲಿ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಣ್ಣ ಮಕ್ಕಳು ಮಾತನಾಡದಂತಹ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ನಮ್ಮ ಸರ್ಕಾರ ಸದೃಢ ಆಡಳಿತ ನಡೆಸುತ್ತಿದ್ದು, ವಿರೋಧ ಪಕ್ಷಗಳು ಸರ್ಕಾರಕ್ಕೆ ಮುಜುಗರ ತರುವಂತಹ ಹೋರಾಟ ಅಥವಾ ವಿಷಯಾಧಾರಿತ ಚರ್ಚೆ ನಡೆಸಿಲ್ಲ. ಹೆಚ್ಚು ಜಿಎಸ್‌ಟಿ ಪಾವತಿಸುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಷ್ಟು ಅನುದಾನ ನೀಡುತ್ತಿದೆ ಎಂಬುದನ್ನು ಮಾಧ್ಯಮಗಳು ಪ್ರಶ್ನಿಸಬೇಕು ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಜಿಎಸ್‌ಟಿ ಪಾಲು ಬಂದಿದೆ:
ಬೆಳಗಾವಿ ಸುವರ್ಣಸೌಧದ ವಿದ್ಯುತ್ ಬಿಲ್ ಬಾಕಿ ವಿಚಾರವಾಗಿ ವಿರೋಧ ಪಕ್ಷದವರು ಪ್ರಶ್ನಿಸುತ್ತಿರುವುದಕ್ಕೆ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿರುಗೇಟು ನೀಡಿದ್ದಾರೆ. ನಮಗೆ ಕರೆಂಟ್ ಬಿಲ್ ಕಟ್ಟಲು ಗೊತ್ತಿದೆ. ನಮ್ಮ ಬಳಿ ಹಣವಿಲ್ಲ ಎಂದು ಯಾರ ಬಳಿಯೂ ಕೇಳಿದ್ದೇವೆಯೇ? ನಮ್ಮನ್ನು ಪ್ರಶ್ನಿಸುವವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ, ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಕ್ಕೆ ಎಷ್ಟು ಪಾಲು ನೀಡಿದೆ ಎಂಬುದನ್ನು ಪ್ರಶ್ನಿಸಲಿ ಎಂದು ಹೇಳಿದರು.
ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿಲ್ಲ. ವಿರೋಧ ಪಕ್ಷದವರು ಹಾಲಿನ ದರ ಏರಿಕೆ ಬಗ್ಗೆ ಮಾತನಾಡುತ್ತಾರೆ. ಆದರೆ ರೈತರಿಗಾಗಿ ಅವರು ಮಾಡಿರುವ ಸಾಧನೆ ಏನು ಎಂದು ಪ್ರಶ್ನಿಸಿದರು. ಹಸು ಸಾಕಲು ರೈತರು ಪಡುವ ಕಷ್ಟವನ್ನು ಯಾರೂ ಕೇಳುತ್ತಿಲ್ಲ. ರೈತರ ನೆರವಿಗೆ ಕೇಂದ್ರ ಸರ್ಕಾರ ಬರುತ್ತಿದೆಯೇ? ನಮ್ಮ ಸಮಸ್ಯೆಗಳು ಕೇಂದ್ರಕ್ಕೆ ಬೇಕಾಗಿಲ್ಲವೇ ಎಂದು ಪ್ರಶ್ನಿಸಿದರು.
2014ರಿಂದ ಇಲ್ಲಿಯವರೆಗೆ ಪೆಟ್ರೋಲ್ ದರ ಎಷ್ಟು ಹೆಚ್ಚಾಗಿದೆ? ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಎಷ್ಟಿದೆ? ಬೆಲೆ ಏರಿಕೆಯಾದಾಗ ದರ ಹೆಚ್ಚಿಸುತ್ತಾರೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದಾಗ ದೇಶದಲ್ಲಿ ಪೆಟ್ರೋಲ್ ದರ ಏಕೆ ಇಳಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.






