ತಿಂಗಳಲ್ಲಿ ಇ-ಸ್ವತ್ತು ತಂತ್ರಾಂಶದ ಸಮಸ್ಯೆ ಇತ್ಯರ್ಥ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಜ.28: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು 2.0 ತಂತ್ರಾಂಶದ ಸಮಸ್ಯೆಗಳನ್ನು ಇನ್ನೊಂದು ತಿಂಗಳಲ್ಲಿ ಬಗೆಹರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕಿರಣ್‍ಕುಮಾರ್ ಕೂಡ್ಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹೊಸ ತಂತ್ರಾಂಶ ಅಳವಡಿಸಿದ ಹಿನ್ನೆಲೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅಲ್ಲದೆ, ಸಮಸ್ಯೆಗಳನ್ನು ಪರಿಹರಿಸಿ ಉನ್ನತ್ತಿಕರಿಸುವ ನಿಟ್ಟಿನಲ್ಲಿ ಇಲಾಖೆ ಎಲ್ಲ ಪ್ರಯತ್ನಗಳನ್ನು ನಡೆಸಿದೆ. ಆದರೆ, ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‍ಐಸಿ) ಕೇಂದ್ರ ಐಟಿ ಇಲಾಖೆ ಅಡಿಯಲ್ಲಿ ಬರುತ್ತಿದ್ದು, ಅವರಿಗೆ ಪತ್ರವನ್ನು ಬರೆಯಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಇ-ಸ್ವತ್ತಿನಲ್ಲಿ ಸುಧಾರಣೆ, ಸಬಲೀಕರಣ ಮತ್ತು ಸರಳೀಕರಣವನ್ನು ಗಮನದಲ್ಲಿಟ್ಟುಕೊಂಡು ಇ-ಸ್ವತ್ತು 2.0 ತಂತ್ರಾಂಶವನ್ನು ಅಳವಡಿಸಲಾಗಿದೆ. ಇದರಲ್ಲಿ ಕೆಲ ಸಮಸ್ಯೆಗಳಿದ್ದು ಅದನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ವಹಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರು ಮತ್ತು ಬಳಕೆದಾರರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.





