ಕೆಎಸ್ಸಾರ್ಟಿಸಿಯ ಫ್ಲೈಬಸ್ ಸೇವೆಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ
ಪ್ರತಿನಿತ್ಯ ಮೈಸೂರು, ಕುಂದಾಪುರ ಹಾಗೂ ಮಡಿಕೇರಿ ಮಾರ್ಗಗಳಲ್ಲಿ ಸಂಚಾರ

ಬೆಂಗಳೂರು: ಪ್ರಸ್ತುತ ವಿಮಾನ ನಿಲ್ದಾಣದಿಂದ ಕೆಎಸ್ಸಾರ್ಟಿಸಿಯ ಒಟ್ಟು 13 ಫ್ಲೈಬಸ್ ಸೇವೆಗಳನ್ನು 42 ಟ್ರಿಪ್‍ಗಳ ಮುಖಾಂತರ ಪ್ರತಿನಿತ್ಯ ಮೈಸೂರು, ಕುಂದಾಪುರ ಹಾಗೂ ಮಡಿಕೇರಿ ಮಾರ್ಗಗಳಲ್ಲಿ ಒದಗಿಸಲಾಗಿದೆ ಎಂದು ಸಾರಿಗೆ ಸಚಿವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎರಡನೆ ಟರ್ಮಿನಲ್ ನಿಂದ ನಿಗಮದ ಫ್ಲೈಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಫ್ಲೈಬಸ್ ಪ್ರತಿಷ್ಠಿತ ವಾಹನಗಳಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಯವು ಪ್ರಾಮುಖವಾದ ಕಾರಣ, ಹಾಗಾಗಿ ಫ್ಲೈ ಬಸ್‍ಗಳಲ್ಲಿ ನಿರ್ದಿಷ್ಟ ನಿಲುಗಡೆಗಳು ಮಾತ್ರ ಇರುತ್ತವೆ ಎಂದರು.
ಪ್ರಯಾಣಿಕರು ಮೈಸೂರು ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಇತರೆ ವಾಹನದಲ್ಲಿ ಪ್ರಯಾಣಿಸಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಬಿಎಂಟಿಸಿ ಬಸ್ ಅಥವಾ ವೋಲಾ, ಉಬರ್ ಬಳಸಿದಲ್ಲಿ ಪ್ರತ್ಯೇಕ ಪ್ರಯಾಣದರ ಪಾವತಿಸಿ, ದುಪ್ಪಟ್ಟುದರದೊಂದಿಗೆ ಪ್ರಯಾಣಿಸಬೇಕಾಗಿರುತ್ತದೆ. ಅಲ್ಲದೇ ಎರಡು ಸ್ಥಳಗಳಲ್ಲಿ ವಾಹನ ಬದಲಾವಣೆ ಮಾಡಬೇಕಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ ಸಮಯದ, ಹಣದ ವ್ಯರ್ಥವಾಗುತ್ತದೆ ಎಂದರು.
ಫ್ಲೈ ಬಸ್‍ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಜೈವಿಕ ಶೌಚಾಲಯ ವ್ಯವಸ್ಥೆ ಇರುತ್ತದೆ. ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹೆಚ್ಚಿನ ಲಗೇಜುಗಳನ್ನು ಕೊಂಡೊಯ್ಯುವುದರಿಂದ ಪ್ರಯಾಣಿಕರುಕೊಂಡೊಯ್ಯುವ ಸ್ವಂತ ಲಗೇಜುಗಳಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಹಿರಿಯ ಅಧಿಕಾರಿ ಜಿ.ಸತ್ಯವತಿ ಸೇರಿದಂತೆ ಮತ್ತಿತರ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.







