ಮುಸ್ಲಿಮ್ ನಾಯಕರ ಮೇಲಿನ ಕ್ರಮಕ್ಕೆ ಸಂಪುಟ ಸಭೆಯಲ್ಲಿ ಸಚಿವರ ಆಕ್ರೋಶ

ಬೆಂಗಳೂರು : ಮುಸ್ಲಿಮ್ ನಾಯಕರ ವಿರುದ್ಧದ ಶಿಸ್ತು ಕ್ರಮ ಮತ್ತು ಚುನಾವಣಾ ವೈಫಲ್ಯದ ವಿಚಾರ ವಿಧಾನಸೌಧದಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸದ್ದು ಮಾಡಿದ್ದು, ಹಲವು ಸಚಿವರು ಏಕಾಏಕಿ ಕೈಗೊಂಡಿರುವ ಕ್ರಮಕ್ಕೆ ಗರಂ ಆದರು ಎಂದು ಗೊತ್ತಾಗಿದೆ.
ವಿಧಾನ ಪರಿಷತ್‌ನ ಸದಸ್ಯರಾದ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ವಿರುದ್ಧ ತೆಗೆದುಕೊಳ್ಳಲಾಗಿರುವ ಕಠಿಣ ಕ್ರಮದ ಬಗ್ಗೆ ಹಲವು ಸಚಿವರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅದರಲ್ಲೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿ, ಮುಸ್ಲಿಮ್ ಸಮುದಾಯದ ಬೆಂಬಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದರು ಎನ್ನಲಾಗಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಅಬ್ದುಲ್ ಜಬ್ಬಾರ್ ಅವರ ಮೇಲೆ ಕೈಗೊಂಡ ಶಿಸ್ತು ಕ್ರಮದ ಕುರಿತು ಅಸಮಾಧಾನ ಹೊರಹಾಕಿದರು. ಈ ನಡುವೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು, ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಆಗ ನಾನು ಕೇರಳ ಚುನಾವಣಾ ಪ್ರಚಾರದಲ್ಲಿದ್ದೆ ಎಂದು ತಮ್ಮ ಮೇಲಿನ ಆರೋಪಗಳಿಗೆ ಸಮಜಾಯಿಷಿ ನೀಡಿದರು ಎನ್ನಲಾಗಿದೆ.
‘ನನ್ನ-ಝಮೀರ್ ಮಧ್ಯೆ ಗಲಾಟೆ ನಡೆದಿಲ್ಲ’ :
ಸಚಿವ ಸಂಪುಟ ಸಭೆಯಲ್ಲಿ ಗಲಾಟೆ ನಡೆದಿದೆ ಎಂದು ಪತ್ರಿಕೆಗಳಲ್ಲಿ ಬರೆಯಲಾಗಿದೆ. ಆದರೆ, ಅದು ಸುಳ್ಳು. ನನ್ನ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಮಧ್ಯೆ ಯಾವ ಗಲಾಟೆ ನಡೆದಿಲ್ಲ.ಝಮೀರ್ ನನ್ನ ಜತೆ ಮಾತನಾಡಿಲ್ಲ, ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ. ನನ್ನ ಕುಟುಂಬದ ಕೆಲಸದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಗಿಸಿಕೊಂಡು ನಾನು ಹೋದೆ. ಅದರ ಹೊರತಾಗಿ ಬೇರೆ ಯಾವ ವಿಚಾರವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಭೆಯಿಂದ ಹೊರಹೋದ ಡಿಕೆಶಿ :
ಸಭೆಯಲ್ಲಿ ಮುಸ್ಲಿಮ್ ನಾಯಕರ ವಿಚಾರ ಸದ್ದು ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಯಾರು ಏನು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಎನ್ನುವುದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ’ ಎಂದು ಉಲ್ಲೇಖಿಸಿದರು ಎನ್ನಲಾಗಿದೆ. ಆಗ ಕೆಲ ಸಚಿವರು ವಾದಿಸಲು ಮುಂದಾದ ಹಿನ್ನೆಲೆ ಅಸಮಾಧಾನಗೊಂಡ ಶಿವಕುಮಾರ್ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಭೆಯಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ.






