ಭಾಷಾ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಸಂಸ್ಥೆಗಳಿಗೂ ವಿನಾಯಿತಿ: ಆದೇಶ

ಬೆಂಗಳೂರು : ರಾಜ್ಯದಲ್ಲಿ ಮತೀಯ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಸಂಸ್ಥೆಗಳಿಗೆ ಕನಿಷ್ಠ ಶೇಕಡ ಇಂತಿಷ್ಟು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹೊಂದಿರತಕ್ಕದ್ದು ಎಂಬ ಷರತ್ತು ರದ್ದುಪಡಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಭಾಷಾ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಸಂಸ್ಥೆಗಳಿಗೂ ಅನ್ವಯಿಸುವಂತೆ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿ ಮತೀಯ ಅಲ್ಪಸಂಖ್ಯಾತ ಸಮುದಾಯದವರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಮತೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಯೆಂದು ಘೋಷಿಸಲು ಇರುವ ನಿಯಮ, ಆದೇಶಗಳಲ್ಲಿ, ಆ ಶೈಕ್ಷಣಿಕ ಸಂಸ್ಥೆಗಳು ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇಕಡ ಇಂತಿಷ್ಟು ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಅದನ್ನು ರದ್ದುಪಡಿಸಿ ರಾಜ್ಯ ಸರಕಾರ 2024ರ ಮಾ.16ರಂದು ಆದೇಶ ಹೊರಡಿಸಿತ್ತು. ಇದೀಗ ಆ ಆದೇಶವನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ಭಾಷಾ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಸಂಸ್ಥೆಗಳಿಗೂ ಅನ್ವಯಿಸುವಂತೆ ಆದೇಶಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಏಜಾಝ್ ಪಾಷ ತಿಳಿಸಿದ್ದಾರೆ.





