ಮೋದಿ ನಮ್ಮ ಸಾಧನೆಗಳನ್ನು ಮೆಚ್ಚುತ್ತಿದ್ದಾರೆ, ಕರ್ನಾಟಕದ ಬಿಜೆಪಿ ನಾಯಕರು ಮೆಚ್ಚಲು ತಯಾರಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ
"ಮೋದಿಯವರ ‘ಮನ್ ಕಿ ಬಾತ್’ನಲ್ಲಿ ನಮ್ಮ ‘ಕಾಮ್ ಕಿ ಬಾತ್’ ಸದ್ದು ಮಾಡಿವೆ"

ಪ್ರಿಯಾಂಕ್ ಖರ್ಗೆ
ಬೆಂಗಳೂರು : ನಮ್ಮ ಸಾಧನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುತ್ತಿದ್ದಾರೆ. ಆದರೆ, ಕರ್ನಾಟಕದ ಬಿಜೆಪಿಯವರು ಮೆಚ್ಚಲು ತಯಾರಿಲ್ಲ. ನನ್ನ ಸಾಧನೆಗಳು ಮತ್ತು ಕೆಲಸಗಳನ್ನು ಪ್ರಶ್ನಿಸುವುದು ಬಿಜೆಪಿ ಸ್ನೇಹಿತರಿಗೆ ನಿತ್ಯದ ಉದ್ಯೋಗದಂತಾಗಿದೆ. ಉತ್ತರ ಸಿಕ್ಕರೂ ಮತ್ತೆ ಅದೇ ಪ್ರಶ್ನೆಗಳನ್ನು ಎತ್ತುವುದು ಅವರ ಹವ್ಯಾಸವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸುವುದಕ್ಕಿಂತ ಕೇಂದ್ರ ಸರ್ಕಾರವೇ ನನ್ನ ಕೆಲಸಗಳ ಬಗ್ಗೆ ಪುರಾವೆಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
“ಮೋದಿಯವರ ‘ಮನ್ ಕಿ ಬಾತ್’ನಲ್ಲಿ ನಮ್ಮ ‘ಕಾಮ್ ಕಿ ಬಾತ್’ ಸದ್ದು ಮಾಡಿವೆ. ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದೇನು ಎಂದು ಕೇಳುವ ಬಿಜೆಪಿಯವರಿಗೆ ಮೋದಿಯವರ ‘ಮನ್ ಕಿ ಬಾತ್’ ಉತ್ತರವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ ರೊಟ್ಟಿಗಳ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡ ಕ್ರಮಗಳಿಂದಾಗಿ ಅವು ಈಗ ಜಾಗತಿಕ ಮಾರುಕಟ್ಟೆ ಪ್ರವೇಶಿಸಿವೆ ಎಂದು ಹೇಳಿದ್ದಾರೆ.
ಈ ಹಿಂದೆ ‘ಮನ್ ಕಿ ಬಾತ್’ನಲ್ಲಿ ಕಲಬುರಗಿ ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಇದೀಗ ಜಿಐ ಟ್ಯಾಗ್ ಪಡೆದಿರುವ ಕಲಬುರಗಿ ತೊಗರಿಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡುತ್ತಿರುವ ಉಪಕ್ರಮದ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯ ವೈಶಿಷ್ಟ್ಯಪೂರ್ಣ ತೊಗರಿಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಜಿಲ್ಲೆಯ ರೈತರಿಗೆ ಶೇ.30ರಷ್ಟು ಹೆಚ್ಚಿನ ಧಾರಣೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು, ಹುರುಳಿ ಮುಂತಾದ ಬೆಳೆಗಳನ್ನು ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಎನರ್ಜಿ ಬಾರ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಶಿಷ್ಟ ಕಾರ್ಯಕ್ರಮವೂ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
‘ಕಲಬುರಗಿ ಪಲ್ಸ್’, ‘ಭೀಮಾ ಪಲ್ಸ್’, ‘ಕಲಬುರಗಿ ಖಡಕ್ ರೊಟ್ಟಿ’ ಹಾಗೂ ‘ಕಮಲಾಪುರ ಕೆಂಪು ಬಾಳೆ’ ಸೇರಿದಂತೆ ಇಲ್ಲಿನ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
“ಬಿಜೆಪಿಯವರು ನನ್ನನ್ನು ಪ್ರಶ್ನಿಸುವ ಮತ್ತು ಟೀಕಿಸುವ ಮೊದಲು ಮೋದಿಯವರ ‘ಮನ್ ಕಿ ಬಾತ್’ ಕೇಳಲಿ. ನಂತರ ಆತ್ಮಸಾಕ್ಷಿಯಿಂದ ತಮ್ಮ ‘ದಿಲ್ ಕಿ ಬಾತ್’ ಆಡಲಿ” ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.






