ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಮೋಹನದಾಸ್ ಹೆಗ್ಡೆ ಮನವಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ರಾಜ್ಯದ ಪಶ್ಚಿಮಘಟ್ಟಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಗಳಿಗೆ ವಿಶೇಷ ಸಾಂವಿಧಾನಿಕ ಸ್ಥಾನಮಾನ ಹಾಗೂ ಸೂಕ್ತ ಸಾಂಸ್ಥಿಕ ವ್ಯವಸ್ಥೆಯನ್ನು ಕಲ್ಪಿಸಲು ಸಂವಿಧಾನಕ್ಕೆ ಹೊಸದಾಗಿ ಪ್ರಸ್ತಾವಿತ 371 ‘ಕೆ’ ವಿಧಿಯನ್ನು ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್. ಮೋಹನದಾಸ್ ಹೆಗ್ಡೆ ಕೋರಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿರುವ ಅವರು, ಈ ಪ್ರದೇಶಗಳ ವಿಶಿಷ್ಟ ಪರಿಸರ, ಭೌಗೋಳಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಸಂಬಂಧಿತ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ನಿಗದಿತ ಪ್ರಕ್ರಿಯೆಯ ಮೂಲಕ ಸೂಕ್ತ ರಕ್ಷಣಾತ್ಮಕ ಮತ್ತು ಅಭಿವೃದ್ಧಿ ಚೌಕಟ್ಟನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.
ಪರಿಸರ ಮಹತ್ವ : ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿರುವ ಪಶ್ಚಿಮಘಟ್ಟಗಳು ಭಾರತದ ಅತ್ಯಂತ ಮಹತ್ವದ ಪರಿಸರ ಪ್ರದೇಶಗಳಲ್ಲಿ ಒಂದಾಗಿವೆ. ಇವು ಅಪಾರ ಜೀವವೈವಿಧ್ಯ, ಅರಣ್ಯ ಸಂಪತ್ತು, ವನ್ಯಜೀವಿಗಳು, ನದಿಗಳು ಮತ್ತು ಜಲಾನಯನ ಪ್ರದೇಶಗಳನ್ನು ಹೊಂದಿವೆ. ಕರ್ನಾಟಕದ ಕರಾವಳಿ ಪ್ರದೇಶಗಳೊಂದಿಗೆ ಸೇರಿ, ಈ ಪ್ರದೇಶಗಳು ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಾಂಪ್ರದಾಯಿಕ ವೃತ್ತಿಗಳು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಅಭಿವೃದ್ಧಿಯ ಸಮತೋಲನ: ಪರಿಸರ ಸಂರಕ್ಷಣೆ ಮತ್ತು ಮಾನವ ಅಭಿವೃದ್ಧಿ ಎರಡೂ ಪರಸ್ಪರ ಪೂರಕವಾಗಿ ಸಾಗಬೇಕೆಂಬ ತತ್ವವನ್ನು ಈ ಪ್ರಸ್ತಾವನೆ ಪ್ರತಿಪಾದಿಸುತ್ತದೆ. ಈ ಪ್ರದೇಶಗಳ ಜನರು ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ, ಜೀವನೋಪಾಯ ಭದ್ರತೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪರಿಸರ ಸೂಕ್ಷ್ಮ ವಲಯ ಮತ್ತು ಕರಾವಳಿ ನಿಯಂತ್ರಣ ವಲಯ ನಿಯಮಗಳ ಅನುಷ್ಠಾನದಲ್ಲಿ ವೈಜ್ಞಾನಿಕ ನಕ್ಷೆ ಸಿದ್ಧಪಡಿಸುವಿಕೆ, ಕಾನೂನು ಸ್ಪಷ್ಟತೆ ಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಬೇಕು. ಇದೇ ವೇಳೆ ಅಗತ್ಯ ಪರಿಸರ ಸಂರಕ್ಷಣಾ ಕ್ರಮಗಳಿಗೆ ಧಕ್ಕೆಯಾಗದಂತೆ, ಈಗಾಗಲೇ ಅಸ್ತಿತ್ವದಲ್ಲಿರುವ ಜನವಸತಿ ಪ್ರದೇಶಗಳು, ಕೃಷಿ ಭೂಮಿಗಳು, ತೋಟಗಾರಿಕೆ ಪ್ರದೇಶಗಳು, ಸಾಂಪ್ರದಾಯಿಕ ಮೀನುಗಾರ ಸಮುದಾಯಗಳು ಮತ್ತು ಅತ್ಯಗತ್ಯ ಮೂಲಸೌಕರ್ಯಗಳ ವಾಸ್ತವಿಕ ಅಗತ್ಯಗಳನ್ನು ಸೂಕ್ತವಾಗಿ ಪರಿಗಣಿಸಬೇಕು ಎಂದು ಅವರು ಕೋರಿದ್ದಾರೆ.
ದೂರದೃಷ್ಟಿ: 2037ರ ವೇಳೆಗೆ ಕರ್ನಾಟಕದ ಪಶ್ಚಿಮಘಟ್ಟಗಳು ಮತ್ತು ಕರಾವಳಿ ಪ್ರದೇಶಗಳನ್ನು ಪರಿಸರ ಸಂರಕ್ಷಣೆ, ಸಮುದಾಯಗಳ ಗೌರವ, ಜೀವನೋಪಾಯ ಭದ್ರತೆ, ಸಾಂವಿಧಾನಿಕ ಮಾನ್ಯತೆ ಮತ್ತು ಸಮಗ್ರ ಆರ್ಥಿಕ ಅಭಿವೃದ್ಧಿ ಪರಸ್ಪರ ಪೂರಕವಾಗಿ ಮುನ್ನಡೆಯುವ ಸಂರಕ್ಷಿತ ಹಾಗೂ ಸಮೃದ್ಧ ಪ್ರದೇಶಗಳನ್ನಾಗಿ ರೂಪಿಸುವುದು ಈ ಪ್ರಸ್ತಾವನೆಯ ಅಂತಿಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.






