ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ : ಮೋಹನ್‍ದಾಸ್ ಪೈ

ಬೆಂಗಳೂರು : ಪ್ರಾಮಾಣಿಕ ತೆರಿಗೆ ಪಾವತಿದಾರರ ಮೇಲೆ ತೆರಿಗೆ ಅಧಿಕಾರಿಗಳು ನಡೆಸುವ ದಾಳಿ ಭೀಕರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಬೇಕು ಎಂದು ಎಂದು ಉದ್ಯಮಿ ಮೋಹನ್‍ದಾಸ್ ಪೈ ಒತ್ತಾಯಿಸಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ತೆರಿಗೆ ಭಯೋತ್ಪಾದನೆಗೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರನ್ನು ಕಳೆದುಕೊಂಡೆವು. ತೆರಿಗೆ ಅಧಿಕಾರಿಗಳ ದಾಳಿಗೆ ಬಹಳಷ್ಟು ಜನರು ಹೆದರಿಹೋಗಿದ್ದಾರೆ. ನಾಗರಿಕರ ಹಕ್ಕುಗಳ ಮೇಲಿನ ದಾಳಿ ಇದು. ದೇಶವನ್ನು ನಡೆಸಬೇಕಾದ ರೀತಿ ಇದಲ್ಲ. ನಿರ್ಮಲಾ ಸೀತಾರಾಮನ್ ಅವರೇ, ಈ ಬಗ್ಗೆ ಅತ್ಯಂತ ಪಾರದರ್ಶಕ ತನಿಖೆ ನಡೆಯಬೇಕು ಎಂದಿದ್ದಾರೆ.
ಹಣಕಾಸು ಸಚಿವೇ ನಿರ್ಮಲಾ ಸೀತಾರಾಮನ್ ಅವರು ಅಧಿಕಾರಿಗಳ ಅಧಿಕಾರವನ್ನು ಹೆಚ್ಚಿಸುತ್ತಲೇ ಇದ್ದಾರೆ. ಆದರೆ ತೆರಿಗೆ ಪಾವತಿದಾರರನ್ನು ರಕ್ಷಿಸುವುದು ಯಾರು? ತಪ್ಪಾಗಿ ದಾಳಿ ನಡೆಸಿದ ಅಧಿಕಾರಿಗಳನ್ನು ಶಿಕ್ಷಿಸುವುದು ಯಾರು? ಪ್ರಧಾನಿಯವರೇ, ಇಂತಹ ತೆರಿಗೆ ಅಧಿಕಾರಿಗಳಿಂದ ನಮ್ಮನ್ನು ರಕ್ಷಿಸಿ' ಎಂದು ಅವರು ಮನವಿ ಮಾಡಿದ್ದಾರೆ.
ದೇಶಾದ್ಯಂತ ಮೂರು ವರ್ಷಗಳಲ್ಲಿ ನೇರ ತೆರಿಗೆ ಮೂಲಕ 72 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆಯೇ? ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ಎಷ್ಟು ಕೋಟಿ ಸಂಗ್ರಹಿಸಲಾಗಿದೆ? ನ್ಯಾಯಾಲಯಗಳ ವ್ಯಾಜ್ಯಗಳಲ್ಲಿ ಎಷ್ಟು ಹಣ ಸಿಲುಕಿಕೊಂಡಿದೆ ಎಂಬುದರ ಕುರಿತಾದ ಸಂಪೂರ್ಣ ದತ್ತಾಂಶವನ್ನು ನಿರ್ಮಲಾ ಸೀತಾರಾಮನ್ ಒದಗಿಸಬೇಕು ಎಂದು ಮೋಹನ್‍ದಾಸ್ ಪೈ ಆಗ್ರಹಿಸಿದ್ದಾರೆ.







