Monsoon session | ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುವ ವಿಚಾರಕ್ಕೆ ಚರ್ಚೆ

ಬೆಂಗಳೂರು : ವಿಧಾನ ಮಂಡಲದ ಅಧಿವೇಶನದ ಮೊದಲ ದಿನವೇ ಸಂತಾಪ ಸೂಚನೆ ಹಾಗೂ ನೂತನ ಸಚಿವರ ಪರಿಚಯ ವಿಚಾರಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಕೆಲಕಾಲ ಚರ್ಚೆ ಜರುಗಿತು.
ಗುರುವಾರ ವಿಧಾನಸಭೆಯ ಬೆಳಗಿನ ಕಲಾಪ ವಂದೇ ಮಾತರಂ ಗಾಯನದೊಂದಿಗೆ ಆರಂಭವಾಯಿತು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಮುಂದಾದರು. ಈ ವೇಳೆ ಎದ್ದು ನಿಂತ ವಿಪಕ್ಷ ನಾಯಕ ಆರ್.ಅಶೋಕ್, ಸದನದಲ್ಲಿ ಮೊದಲ ದಿನದ ಪ್ರಾರಂಭದಲ್ಲಿಯೇ ಸಂತಾಪ ಸೂಚನೆ ನಡೆಯಬೇಕಿದೆ.
ಇನ್ನೊಂದೆಡೆ, ಸಚಿವರಾಗಿ ಅಧಿಕಾರ ಸ್ವೀಕರಿಸಿರುವವರಿಗೆ ಇದು ಸಂಭ್ರಮದ ವಿಚಾರ. ಹೀಗಾಗಿ ಸಂತಾಪ ಸೂಚನೆ ಗಂಭೀರ ವಿಚಾರ. ಈ ಸಂದರ್ಭದ ಜೊತೆಗೆ ನೂತನ ಸಚಿವರ ಪರಿಚಯದ ಸಂಭ್ರಮವನ್ನು ಮಿಶ್ರಣ ಮಾಡುವ ಹೊಸ ಸಂಪ್ರದಾಯ ಬೇಡ ಎಂದು ಆಕ್ಷೇಪಿಸಿದರು.
ಅಧಿವೇಶನದ ಅಧಿಕೃತ ಕಾರ್ಯ ಕಲಾಪಗಳು ಸೋಮವಾರದಿಂದ ಆರಂಭವಾಗಲಿದ್ದು, ಅಂದೇ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಬಹುದು ಎಂದು ಆರ್.ಅಶೋಕ್ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದಲ್ಲಿದ್ದ ಹಂಗಾಮಿ ಸ್ಪೀಕರ್ ಟಿ.ಬಿ.ಜಯಚಂದ್ರ ಮಧ್ಯಪ್ರವೇಶಿಸಿ, ‘ಸಂತಾಪ ಸೂಚನಾ ನಿರ್ಣಯ ಇನ್ನೂ ಮಂಡನೆಯಾಗಿಲ್ಲ. ಆದುದರಿಂದ ಮುಖ್ಯಮಂತ್ರಿ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಬಹುದು’ ಎಂದು ಹೇಳಿದರು.
ಕಲಾಪ ಆರಂಭವಾದ ಸಂದರ್ಭದಲ್ಲಿ ಹೊಸ ಸಚಿವರನ್ನು ಸದನಕ್ಕೆ ಪರಿಚಯಿಸುವುದು ಸಂಪ್ರದಾಯವಾಗಿದೆ. ಇದಕ್ಕೆ ನಿಯಮಗಳಲ್ಲಿಯೂ ಅವಕಾಶವಿದೆ ಎಂದು ಜಯಚಂದ್ರ ಉಲ್ಲೇಖಿಸಿದರು. ಬಳಿಕ ಆರ್.ಅಶೋಕ್ ಪ್ರಸ್ತಾಪಿಸಿ, ಸಂತಾಪ ಸೂಚನೆಯ ಸಂದರ್ಭವನ್ನು ಗೌರವಿಸುವುದು ಮುಖ್ಯವಾಗಿದ್ದು, ಸಚಿವರ ಪರಿಚಯವನ್ನು ನಂತರ ನಡೆಸುವುದು ಸೂಕ್ತ ಎಂದು ಪುನರುಚ್ಚರಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೊದಲು ಸಂತಾಪ ಸೂಚನೆ ನಡೆಯಲಿ. ಆನಂತರವೇ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುತ್ತೇನೆ. ಆರ್.ಅಶೋಕ್ ಅವರ ಭಾವನೆಗಳಿಗೆ ಬೆಂಬಲವಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಯವರ ಸಹಮತದ ಬಳಿಕ ಹಂಗಾಮಿ ಸ್ಪೀಕರ್ ಟಿ.ವಿ.ಜಯಚಂದ್ರ ಅವರು ನೂತನ ಸಚಿವರ ಪರಿಚಯವನ್ನು ಮುಂದೂಡಿ ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡರು.






