ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ನಿರಾಕರಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲಾಗುವುದು : ಮುಹಮ್ಮದ್ ಇಮ್ತಿಯಾಝ್

ಸಿ.ಆರ್.ಮುಹಮ್ಮದ್ ಇಮ್ತಿಯಾಝ್
ಬೆಂಗಳೂರು : ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ಧರಿಸುವ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದರೆ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಒಕ್ಕೂಟದ ಅಧ್ಯಕ್ಷ ಸಿ.ಆರ್.ಮುಹಮ್ಮದ್ ಇಮ್ತಿಯಾಝ್ ಎಚ್ಚರಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2022ರ ಫೆ.5ರಂದು ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ನಾವು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು 2022ರ ಫೆ.22ರಂದು ನೀಡಿರುವ ಆದೇಶದಲ್ಲಿ ಆ ಸುತ್ತೋಲೆಯನ್ನು ರದ್ದುಪಡಿಸಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಸುತ್ತೋಲೆ ಅನ್ವಯಿಸುವುದಿಲ್ಲ. ಭಾರತೀಯ ಸಂವಿಧಾನದ ಕಲಂ 30 (1) ಅನ್ವಯ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಇದನ್ನು ಹೇರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ ಎಂದು ಮುಹಮ್ಮದ್ ಇಮ್ತಿಯಾಝ್ ತಿಳಿಸಿದರು.
ಆದುದರಿಂದ, ಹೈಕೋರ್ಟ್ ನಿರ್ದೇಶನದಂತೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿನಿಯರನ್ನು ಹಿಜಾಬ್ ಸಹಿತ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಕಲ್ಪಿಸುವಂತೆ, ಪರೀಕ್ಷಾ ಪ್ರಾಧಿಕಾರ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಸುತ್ತೋಲೆ ಹೊರಡಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪಗೆ ಮುಹಮ್ಮದ್ ಇಮ್ತಿಯಾಝ್ ಮನವಿ ಮಾಡಿದರು.
ಹೈಕೋರ್ಟ್ ಆದೇಶವನ್ನು ತಕ್ಷಣ ಜಾರಿಗೆ ತರದಿದ್ದರೆ, ಹೈಕೋರ್ಟ್ ಮೊರೆ ಹೋಗಿ, ಶಿಕ್ಷಣ ಸಚಿವ ಸೇರಿದಂತೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ. ನಾವು ನಿರಂತರವಾಗಿ ಈ ಸಂಬಂಧ ಸರಕಾರಕ್ಕೆ ಪತ್ರಗಳನ್ನು ಬರೆಯುತ್ತಿದ್ದೇವೆ. ಆದರೂ ಕೆಲವು ಅಧಿಕಾರಿಗಳು ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿಗೆ 2025-26ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಅನುಮತಿ ನೀಡದಂತೆ ಸುತ್ತೋಲೆ ಹೊರಡಿಸುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂಬ ಅರ್ಥದಲ್ಲಿ ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ನೀಡಿರುವ ಹೇಳಿಕೆಯು ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೇ, ಅವರ ಹೇಳಿಕೆಯು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ನಮ್ಮ ಒಕ್ಕೂಟ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಯಾರೊಬ್ಬರೂ ಮೇಲ್ಮನವಿಯೂ ಸಿಲ್ಲಿಸಿಲ್ಲ ಎಂದು ಮುಹಮ್ಮದ್ ಇಮ್ತಿಯಾಝ್ ತಿಳಿಸಿದರು.







