ಶಿಕ್ಷಕರ ಕ್ಷೇತ್ರದ ಚುನಾವಣೆ : ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಯತ್ನ ಆರೋಪ ; ಅಂಬೇಡ್ಕರ್ ಕಾಲೇಜಿನ ಆವರಣದಲ್ಲಿ ಗಲಾಟೆ

ಬೆಂಗಳೂರು : ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾಗರಬಾವಿಯ ಅಂಬೇಡ್ಕರ್ ಕಾಲೇಜಿನಲ್ಲಿ ಮತದಾನ ನಡೆಯುವಾಗ ಸ್ಥಳಕ್ಕೆ ಆಗಮಿಸಿದ್ದ ಆರ್.ಆರ್. ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ವೇಳೆ ಕಾಲೇಜಿನ ಆವರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ.
ಆರ್.ಆರ್. ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕಾಲೇಜಿನ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ಗೆ ಬೆಂಬಲ ಸೂಚಿಸಲು ಬಂದಿದ್ದೇನೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಬಂದು ರಕ್ಷಿಸಿದ್ದಾರೆ, ಇಲ್ಲವಾದರೆ ಸಾಯಿಸಿ ಬಿಡುತ್ತಿದ್ದರು ಕಾಂಗ್ರೆಸ್ ಅಭ್ಯರ್ಥಿ ಹೊರಗಡೆಯಿಂದ ಜನರನ್ನು ಕರೆಸಿದ್ದಾರೆ. ಈ ವಿಚಾರವನ್ನು ಎಚ್.ಡಿ.ಕುಮಾರಸ್ವಾಮಿಗೆ ಮಾಹಿತಿ ನೀಡಿದ್ದೇನೆ ಎಂದರು.




