ಜಿ.ಸಿ.ಬಯ್ಯಾರೆಡ್ಡಿ ಸಮಾನತೆಯ ತತ್ವ ಮೈಗೂಡಿಸಿಕೊಂಡಿದ್ದರು: ಕೆ.ಎಚ್.ಮುನಿಯಪ್ಪ

ಬೆಂಗಳೂರು, ಜ.31: ಯಾವುದೇ ಜಾತಿ, ಧರ್ಮವಾಗಲಿ ನಾವು ಸಮಾನತೆಯನ್ನು ಕಾಣಬೇಕಾಗುತ್ತದೆ ಎಂಬ ತತ್ವಗಳನ್ನು ಮೈಗೂಡಿಸಿಕೊಂಡಂತವರು ಸಿಪಿಎಂ ಮುಖಂಡ ಜಿ.ಸಿ.ಬಯ್ಯಾರೆಡ್ಡಿ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಶುಕ್ರವಾರ ನಗರದ ಸಚಿವಾಲಯ ನೌಕರರ ಸಭಾಂಗಣದಲ್ಲಿ ಸಿಪಿಎಂ ವತಿಯಿಂದ ಆಯೋಜಿಸಿದ್ದ ಸಿಪಿಎಂ ನಾಯಕ ಜಿ.ಸಿ.ಬಯ್ಯಾರೆಡ್ಡಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಯ್ಯಾರೆಡ್ಡಿ ಅವರು ನನಗೆ ಬಹಳ ದೀರ್ಘ ಕಾಲದ ಸ್ನೇಹಿತರಾಗಿದ್ದವರು. ನಾನು ಅಭ್ಯರ್ಥಿ ಯಾಗಿದ್ದಾಗ ನನಗೆ ಹಲವು ಬಾರಿ ಪರೋಕ್ಷವಾಗಿ ಬೆಂಬಲ, ಸಹಕಾರವನ್ನು ಮಾಡಿದ್ದಾರೆ. ಇತ್ತೀಚೆಗೆ ಚನ್ನರಾಯಪಟ್ಟಣ ರೈತರ ಭೂಮಿಯ ವಿಚಾರವಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಯಲ್ಲಿ ಅವರು ಉಸಿರಾಟದ ಸಮಸ್ಯಯಿದ್ದರೂ ಆಕ್ಸಿಜನ್ ಕಿಟ್‍ನ್ನು ಹೊತ್ತು ಬಂದಿದ್ದರು. ಆಗ ಅವರು ಆರೋಗ್ಯಕ್ಕಿಂತ ರೈತರೇ ಮುಖ್ಯ ಎಂದಿದ್ದರು. ಅವರ ಹೋರಾಟಗಳು ಅವರ ತತ್ವ ಆದರ್ಶಗಳು ಜೀವಂತವಾಗಿರುತ್ತವೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಬಯ್ಯಾರೆಡ್ಡಿ ಅವರು ಆರಂಭದ ದಿನಗಳಿಂದ ಕೊನೆವರೆಗೂ ತಾವು ನಂಬಿದ ತತ್ವಗಳಿಗೆ ಬದ್ಧವಾಗಿದ್ದರು. ಹೋರಾಟವನ್ನೇ ಧ್ಯಾನಿಸುತ್ತಾ ಇದ್ದವರು. ನಮ್ಮಲ್ಲಿ ನೈತಿಕತೆಯ ಅನೇಕ ಆಯಾಮಗಳಿವೆ. ಬಯ್ಯಾರೆಡ್ಡಿ ಅವರು ಸೈದ್ಧಾಂತಿಕ ನೈತಿಕತೆ ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.
ಯಾವುದೇ ಒಂದು ಸಿದ್ಧಾಂತ ಸೃಜನಶೀಲ, ಚಲನಶೀಲವಾಗದಿದ್ದರೆ, ಅದು ಜಡವಾಗಿ ಹೋಗುತ್ತದೆ. ಬಯ್ಯಾರೆಡ್ಡಿ ಅವರಲ್ಲಿ ತಾತ್ವಿಕತೆ ಹೃದಯಸ್ತವಾಗಿತ್ತು. ಅದಕ್ಕೆ ಮಾನವೀಯ ಮಿಡಿತ ಇತ್ತು. ಭೂ ಹೋರಾಟಗಳಲ್ಲಿ ಹೆಚ್ಚು ಭಾಗವಹಿಸಿದ್ದವರು, ಬೆಂಬಲ ಬೆಲೆ ಇತ್ಯಾದಿ ಹೋರಾಟಗಳನ್ನು ಕಟ್ಟಿದರು. ಅವರ ಹೋರಾಟದ ಬಹುಮುಖ್ಯ ಆಯಾಮ ಭೂಮಿಯೇ ಆಗಿತ್ತು ಎಂದು ತಿಳಿಸಿದರು.
ಹಿರಿಯ ಕವಿ ಡಾ.ಎಲ್.ಹನುಮಂತಯ್ಯ ಮಾತನಾಡಿ, ಬಯ್ಯಾರೆಡ್ಡಿ ಅವರು ದೊಡ್ಡ ಕಮ್ಯುನಿಸ್ಟ್ ವಾದಿ ಯಾಗಿದ್ದರು ಕೂಡ, ವಿವಿಧ ಜನಾಂದೋಲನಗಳನ್ನ ನೇಯ್ಗೆ ಮಾಡಿ, ಅವುಗಳನ್ನು ಒಟ್ಟುಗೂಡಿಸಿ ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಆಶಯವನ್ನು ಹೊಂದಿದ್ದರು. ಅವರು ಅನೇಕ ಬಾರಿ ಜನಾಂದೋಲನಗಳನ್ನು ಒಟ್ಟುಗೂಡಿಸುವ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಸಿಪಿಐ(ಎಂ) ರಾಜ್ಯಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಸಿಪಿಐ(ಎಂ) ನಾಯಕ ಎಂ.ಎ.ಬೇಬಿ, ಕೆ.ನೀಲಾ ಮತ್ತಿತರರು ಉಪಸ್ಥಿತರಿದ್ದರು.







