ಬೆಂಗಳೂರು | ಜಾತ್ರೆಯಲ್ಲಿ ಪರಿಚಯವಾದ ಗೃಹಿಣಿ: ಹೋಟೆಲ್ ರೂಮ್ಗೆ ಕರೆಸಿ ಹತ್ಯೆ ಮಾಡಿದ ಸಾಫ್ಟ್ವೇರ್ ಇಂಜಿನಿಯರ್ ಬಂಧನ

ಬಂಧಿತ ಆರೋಪಿ ಯಶಸ್(25)
ಬೆಂಗಳೂರು : ಪರಿಚಯವಾದ ಬಳಿಕ ತನ್ನಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಿದ ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಆರೋಪದಡಿ ಸಾಫ್ಟ್ವೇರ್ ಇಂಜಿನಿಯರ್ನನ್ನು ಇಲ್ಲಿನ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಜೂ.7ರಂದು ರಾತ್ರಿ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಪೂರ್ಣಪ್ರಜ್ಞಾ ಲೇಔಟ್ನ ಖಾಸಗಿ ಹೋಟೆಲ್ವೊಂದರಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹರಿಣಿ(33) ಕೊಲೆಯಾದ ಮಹಿಳೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ತಲಘಟ್ಟಪುರದ ನಿವಾಸಿ ಯಶಸ್(25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ವಿವಾಹಿತಳಾಗಿದ್ದ ಮಹಿಳೆಯು ಪತಿಯೊಂದಿಗೆ ಕೆಂಗೇರಿ ವ್ಯಾಪ್ತಿಯಲ್ಲಿ ವಾಸವಿದ್ದರು. ಕೆಲ ತಿಂಗಳುಗಳ ಹಿಂದೆ ನಡೆದ ಜಾತ್ರೆಯಲ್ಲಿ ಕಾಮನ್ ಫ್ರೆಂಡ್ ಒಬ್ಬರ ಮೂಲಕ ಮಹಿಳೆ ಮತ್ತು ಯಶಸ್ ಮಧ್ಯೆ ಪರಿಚಯವಾಗಿತ್ತು. ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಇಬ್ಬರೂ ಸಹ ಹಲವು ಬಾರಿ ಭೇಟಿಯಾಗುವುದು, ಮೊಬೈಲ್ನಲ್ಲಿ ಮಾತನಾಡಿದ್ದರು ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದ್ದಾರೆ.
ಕುಟುಂಬದಲ್ಲಿ ಸಮಸ್ಯೆ ಆಗುತ್ತಿದೆ ಎಂದು ತಿಳಿದ ಬಳಿಕ ಮಹಿಳೆಯು ಯಶಸ್ ಜೊತೆ ಅಂತರ ಕಾಯ್ದುಕೊಂಡಿದ್ದಳು. ಆದರೆ, ಮತ್ತೆ ಜೂನ್ 7ರಂದು ಪೂರ್ಣಪ್ರಜ್ಞಾ ಲೇಔಟ್ನ ಖಾಸಗಿ ಹೋಟೆಲ್ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಇದಕ್ಕೂ ಮುನ್ನ ಕೆಲ ದಿನಗಳ ಕಾಲ ಈಕೆ ತನ್ನ ಸಂಪರ್ಕಕ್ಕೆ ಸಿಗದೇ ಚಡಪಡಿಸಿದ್ದ ಯಶಸ್, ಈ ರೀತಿಯಾದರೆ ತನಗೆ ಸಿಗದವಳು ಇನ್ನು ಮುಂದೆ ಯಾರಿಗೂ ಸಿಗಬಾರದು ಎಂದು ನಿರ್ಧರಿಸಿ ಚಾಕುವಿನೊಂದಿಗೆ ಹೋಟೆಲ್ಗೆ ಬಂದಿದ್ದ. ಪೂರ್ವ ನಿರ್ಧಾರವಾಗಿಯೇ ಬಂದವನು ಮಹಿಳೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಸ್ಥಳದಿಂದ ತೆರಳಿದ್ದ ಎಂದು ಎಂದು ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸುಬ್ರಮಣ್ಯಪುರ ಠಾಣೆ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಮಹಿಳೆ ತನ್ನಿಂದ ಅಂತರ ಕಾಪಾಡಿಕೊಳ್ಳಲು ಬಯಸಿದ್ದರಿಂದ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ತನಿಖೆಯನ್ನು ಮುಂದುವರೆಸಿರುವುದಾಗಿ ಎಂದು ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದ್ದಾರೆ.