ಬೆಂಗಳೂರು | ಕತ್ತು ಕೊಯ್ದು ವಿದ್ಯಾರ್ಥಿನಿಯ ಭೀಕರ ಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.16 : ಕತ್ತು ಕೊಯ್ದು ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಇಲ್ಲಿನ ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಭಾಗ ರೈಲ್ವೆ ಟ್ರ್ಯಾಕ್ ಬಳಿ ಗುರುವಾರ ವರದಿಯಾಗಿದೆ.
ಯಾಮಿನಿ ಪ್ರಿಯಾ(20) ಕೊಲೆಯಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ತನ್ನನ್ನು ಪ್ರೀತಿ ಮಾಡಲು ಒಪ್ಪದಿದ್ದ ಕಾರಣಕ್ಕೆ ವಿಘ್ನೇಶ್ ಎಂಬಾತನೇ ಯಾಮಿನಿ ಪ್ರಿಯಾಳನ್ನು ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ. ಈ ಸಂಬಂಧ ಶ್ರೀರಾಮಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
‘ಬಿ ಫಾರ್ಮ್’ ವ್ಯಾಸಂಗ ಮಾಡುತ್ತಿದ್ದ ಯಾಮಿನಿ ಪ್ರಿಯಾ, ಅ.16ರ ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ ಕಾಲೇಜು ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ, ರೈಲ್ವೆ ಟ್ರ್ಯಾಕ್ ಬಳಿ ಯಾಮಿನಿ ಪ್ರಿಯಾಳ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಈ ಪರಿಣಾಮ ತೀವ್ರ ರಕ್ತಸ್ರಾವವಾಗಿ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಶ್ರೀರಾಮಪುರ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ವಿಘ್ನೇಶ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ತನಿಖೆ ಚುರುಕುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.







