ಬೆಂಗಳೂರು | ಪತ್ನಿಯನ್ನು ಹತ್ಯೆಗೈದು ಮೂರು ದಿನ ಜತೆಗಿದ್ದ ಪತಿ..!

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಹತ್ಯೆಗೈದು ಮೂರು ದಿನಗಳ ಕಾಲ ಮೃತದೇಹದ ಜೊತೆ ಕಾಲ ಕಳೆದಿದ್ದ ಆರೋಪಿ ಪತಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಉತ್ತರಪ್ರದೇಶ ಮೂಲದ ಇಲ್ಲಿನ ಹೆಣ್ಣೂರಿನ ಥಣಿಸಂದ್ರ ಬಳಿ ನೆಲೆಸಿದ್ದ ಶಿವಂ ಬಂಧಿತ ಪತಿಯಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಉತ್ತರಪ್ರದೇಶ ಮೂಲದ ದಂಪತಿ ಆರು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಹೆಣ್ಣೂರಿನ ಥಣಿಸಂದ್ರ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶಿವಂ ದಿನಗೂಲಿ ಕೆಲಸ ಮಾಡುತ್ತಿದ್ದು, ಸುಮನಾ ಗೃಹಿಣಿಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ಕೌಟುಂಬಿಕ ವಿಚಾರಕ್ಕಾಗಿ ಇಬ್ಬರು ಜಗಳವಾಡಿದ್ದಾರೆ. ಮದ್ಯದ ಆಮಲಿನಲ್ಲಿದ್ದ ಶಿವಂ ಪತ್ನಿಯ ಮುಖ ಹಾಗೂ ಮೂಗಿಗೆ ಬಲವಾಗಿ ಕೈಯಿಂದ ಹೊಡೆದಿದ್ದಾನೆ. ಆಗ ಮೂಗಿನಿಂದ ರಕ್ತಸ್ರಾವವಾಗಿ ಮಾರನೆ ದಿನ ಬೆಳಗ್ಗೆ ಎದ್ದು ನೋಡಿದಾಗ ಸುಮನಾ ಸಾವನ್ನಪ್ಪಿದ್ದಾಳೆ. ಇದನ್ನು ಅರಿಯದ ಆರೋಪಿ, ಪತ್ನಿ ಮಲಗಿಕೊಂಡಿದ್ಧಾಳೆ ಎಂದು ಭಾವಿಸಿ ಎಂದಿನಂತೆ ಕೆಲಸ ಹೊರಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಪತ್ನಿ ಸಾವನ್ನಪ್ಪಿರುವ ವಿಚಾರ ಆರೋಪಿಗೆ ಗೊತ್ತಾಗಿದೆ. ಇದರಿಂದ ಆತಂಕಗೊಂಡು ಯಾರಿಗೂ ಹೇಳದೆ ಸುಮ್ಮನಾಗಿದ್ದ. ಎಂದಿನಂತೆ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಮೃತದೇಹದ ಪಕ್ಕದಲ್ಲೇ ಅಡುಗೆ ಮಾಡಿ ಮದ್ಯ ಸೇವಿಸಿದ್ದ ಎನ್ನಲಾಗಿದೆ.
ಮೃತದೇಹದಿಂದ ಕೊಳೆತ ವಾಸನೆ ಬರುತ್ತಿದ್ದಂತೆ ನೆರೆಹೊರೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರು. ಇದನ್ನು ಅರಿಯುತ್ತಿದ್ದಂತೆ, ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲಿಸಿದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು.
ಪ್ರಕರಣ ದಾಖಲಿಸಿಕೊಂಡು, ಉತ್ತರಪ್ರದೇಶಕ್ಕೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಯಲಹಂಕ ಬಳಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







