ಬೆಂಗಳೂರು | ಕಚೇರಿಯ ಲೈಟ್ ಆಫ್ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕಚೇರಿಯ ಲೈಟ್ ಆಫ್ ಮಾಡುವ ವಿಚಾರಕ್ಕೆ ರಾತ್ರಿ ಪಾಳಿ ಕೆಲಸಗಾರರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಭೀಮೇಶ್ ಬಾಬು(41) ಎಂಬಾತ ಹತ್ಯೆಯಾಗಿದ್ದು, ಸೋಮಲವಂಶಿ(24) ಎಂಬುವನನ್ನು ಗೋವಿಂದರಾಜನಗರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಪ್ರಕರಣದ ವಿವರ: ಸಿನಿಮಾ ಚಿತ್ರೀಕರಣದ ವಿಡಿಯೋಗಳನ್ನು ದಿನದ ಆಧಾರದಲ್ಲಿ ಸಂಗ್ರಹಿಸಿಡುವ ಕಂಪೆನಿಯಲ್ಲಿ ವಿಜಯವಾಡ ಮೂಲದ ಸೋಮಲ ವಂಶಿ ಹಾಗೂ ಚಿತ್ರದುರ್ಗ ಮೂಲದ ಭೀಮೇಶ್ ಬಾಬು ಕೆಲಸ ಮಾಡಿಕೊಂಡಿದ್ದರು. ಕಚೇರಿಯಲ್ಲಿ ರಾತ್ರಿ ತಂಗುತ್ತಿದ್ದ ಇಬ್ಬರ ನಡುವೆ ಅ.31ರ ರಾತ್ರಿ 1:30ರ ಸುಮಾರಿಗೆ ಲೈಟ್ ಆಫ್ ಮಾಡುವ ವಿಚಾರದಲ್ಲಿ ಪರಸ್ಪರ ಜಗಳ ಆರಂಭವಾಗಿದೆ ಎನ್ನಲಾಗಿದೆ.
ಈ ಸಮಯದಲ್ಲಿ ಕೋಪಗೊಂಡ ಸೋಮಲ ವಂಶಿ ಮಾರಕಾಸ್ತ್ರದಿಂದ ಭೀಮೇಶ್ ಬಾಬುವಿನ ಹಣೆಯ ಮೇಲೆ ಹೊಡೆದಿದ್ದ. ಪರಿಣಾಮ ರಕ್ತಸ್ರಾವವಾಗಿ ಭೀಮೇಶ್ ಬಾಬು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯದ ಬಳಿಕ ಆರೋಪಿ ಸೋಮಲವಂಶಿ ಸ್ವತಃ ತಾತೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.





