Mysuru | ಸಹಬಾಳ್ವೆ, ಸಮಾನತೆ, ಸೌಹಾರ್ದಕ್ಕಾಗಿ ನಡಿಗೆ

ಮೈಸೂರು : ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮ ದಿನದ ಅಂಗವಾಗಿ ದೇಶವನ್ನು ಸರ್ವಜನಾಂಗದ ತೋಟವನ್ನಾಗಿಸಿ ಸಹಬಾಳ್ವೆ, ಸಮಾನತೆ, ಸೌಹಾರ್ದ ನಿರ್ಮಾಣದ ಆಶಯದಲ್ಲಿ ಶುಕ್ರವಾರ ಮೈಸೂರು ನಗರದಲ್ಲಿ ಸೌಹಾರ್ದ ನಡಿಗೆ ಜಾಥಾ ನಡೆಯಿತು.
ಸೌಹಾರ್ದ ಕರ್ನಾಟಕ ಮೈಸೂರು ಘಟಕದ ವತಿಯಿಂದ ಸೇಂಟ್ ಫಿಲೋಮಿನಾ ಚರ್ಚ್‌ನಿಂದ ನಡಿಗೆ ಹೊರಟು, ಆಝಾಮ್ ಮಸೀದಿ, ಅಶೋಕ ರಸ್ತೆ ಮೂಲಕ ಗಾಂಧಿ ಚೌಕದ ಗಾಂಧಿ ಪ್ರತಿಮೆ ತಲುಪಿತು. ನಡಿಗೆಯಲ್ಲಿ ಪಾಲ್ಗೊಂಡವರು ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವ ಆಶಯದ ವಿವಿಧ ಪ್ಲೇಕಾರ್ಡ್‌ಗಳನ್ನು ಹಿಡಿದು ಗಮನಸೆಳೆದರು.
ಚಿಕ್ಕಗಡಿಯಾರ ವೃತ್ತದಲ್ಲಿ ಹಿರಿಯ ರಂಗಕರ್ಮಿ ರಂಗಕರ್ಮಿ ಎನ್.ಜನಾರ್ದನ್ (ಜನ್ನಿ) ಮತ್ತು ದೇವಾನಂದ ವರ ಪ್ರಸಾದ್ ಅವರ ತಂಡದವರು ಸೌಹಾರ್ದ ಗೀತೆ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಸಾಹಿತಿ, ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಮಾತನಾಡಿ, ನಾವೆಲ್ಲರೂ ಸೇರಿ ಪ್ರೀತಿಯ ಸ್ನೇಹದ ಸಂಬಂಧ ರಚಿಸಬೇಕು. ಇದಕ್ಕಿರುವ ಅಡ್ಡಿಗಳನ್ನು ಪ್ರಶ್ನಿಸಿ ಅದನ್ನು ಮೀರುತ್ತ ಸಾಗಬೇಕು ಎಂದು ಹೇಳಿದರು.
ಒಡನಾಡಿಯ ಸ್ಟ್ಯಾನ್ಲಿ ಮಾತನಾಡಿ, ಸತ್ಯ, ಅಹಿಂಸೆ ಉಸಿರಾಡುತ್ತ ಬ್ರಿಟಿಷರಿಂದ ಬಿಡುಗಡೆಗೊಳಿಸಿ ಬಾಪು ಹತ್ಯೆಯು ಸತ್ಯ, ಅಹಿಂಸೆ ಮತ್ತು ಕಾರುಣ್ಯದ ಮೇಲೆ ನಡೆದ ಗುಂಡಿನ ದಾಳಿಯಾಗಿದೆ. ಸಾಮರಸ್ಯದಿಂದ ಬದುಕು ಬಹಳ ಹದಗೆಟ್ಟು ದುರಿತ ದಿನದಲ್ಲಿ ಬದುಕುತ್ತಿದ್ದೇವೆ. ಧರ್ಮಗಳನ್ನು ಭ್ರಷ್ಟಗೊಳಿಸಿ ಮತಾಂಧೆ ಎದ್ದು ಕಾಣುತ್ತಿದೆ. ಸಾಂಸ್ಥಿಕ ಧರ್ಮಗಳ ಮೇಲೆ ನಂಬಿಕೆ ಹೋಗುವಂತೆ ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಧರ್ಮ ರಾಜಕಾರಣ ಒಳಗಣ್ಣಿನಿಂದ ನೋಡುತ್ತ ಒಟ್ಟಾಗಿ ಪ್ರಶ್ನಿಸಬೇಕು ಎಂದರು.
ಹೋರಾಟಗಾರ್ತಿ ಸವಿತಾ ಮಲ್ಲೇಶ್ ಮಾತನಾಡಿದರು. ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶು, ಕರ್ನಾಟಕ ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ,ಪ್ರಗತಿ ಪರ ಚಿಂತಕ ಪ್ರೊ.ಕಾಳಚೆನ್ನೇಗೌಡ, ಪಂಡಿತಾರಾಧ್ಯ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ, ಗೌರವಾಧ್ಯಕ್ಷ ಕಲ್ಲಳ್ಳಿ ಕುಮಾರ್, ವಕೀಲ ಪುನೀತ್, ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು, ಗೋಪಿನಾಥ್, ಪ್ರಭಾಕರ್, ಶ್ರೀದೇವಿ, ಲತಾ ಕೆ.ಬಿದ್ದಪ್ಪ, ಜಯರಾಂ, ಕೆ.ಬಸವರಾಜು, ಚಿರಾಗ್ ಮೂರ್ತಿ, ಹಣ್ಣಪ್ಪ, ನೂರ್ ಮರ್ಚೆಂಟ್, ಎನ್.ವಿಜಯಕುಮಾರ್, ಸುಬ್ರಹ್ಮಣ್ಯ, ಚೌಡಳ್ಳಿ ಜವರಯ್ಯ, ಶ್ರೀಧರ್, ಅಯ್ಯಪ್ಪ ಹೂಗಾರ್, ಡಿ.ಅಭಿ, ಚೇತನ್, ರಾಜೇಂದ್ರ, ನೆಲೆ ಹಿನ್ನೆಲೆ ಗೋಪಾಲ್, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಕುಮಾರ್, ರಘು, ಮಂಜುನಾಥ್, ರಾಘು, ಶ್ರೀಕಂಠ, ಪ್ರಕಾಶ್, ಕೋಚನಹಳ್ಳಿ ಮಹೇಶ್, ಶಿವಣ್ಣ ನಾಯಕ, ಪ್ರೇಮ್ ರಾಜ್, ಜೆ.ರಘು ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.







