‘ಮೈಸೂರು ದಸರಾ’ | 146 ಕಿ.ಮೀ. ದೀಪಾಲಂಕಾರ, 3,500 ಡ್ರೋನ್‍ಗಳ ಪ್ರದರ್ಶನ : ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ-2026ರ ಅಂಗವಾಗಿ ಈ ಬಾರಿ ಮೈಸೂರು ನಗರವನ್ನು ಇನ್ನಷ್ಟು ಆಕರ್ಷಕವಾಗಿ ಕಂಗೊಳಿಸಲು ಒಟ್ಟು 146 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ಭವ್ಯ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ನಗರದ 199 ರಸ್ತೆಗಳು, 123 ವೃತ್ತಗಳು ಹಾಗೂ 80 ವಿವಿಧ ಪ್ರತಿಕೃತಿಗಳಿಗೆ ವಿಶೇಷ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ದೀಪಾಲಂಕಾರ ವ್ಯವಸ್ಥೆ ಅ.11ರಿಂದ 31ರವರೆಗೆ ಒಟ್ಟು 21 ದಿನಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ದಸರಾ ದೀಪಾಲಂಕಾರದ ಜೊತೆಗೆ 3,500 ಎಲ್‍ಇಡಿ ಡ್ರೋನ್‍ಗಳನ್ನು ಬಳಸಿ ನಾಲ್ಕು ದಿನ ವಿಶೇಷ ಡ್ರೋನ್ ಪ್ರದರ್ಶನ ಆಯೋಜಿಸಲು ಯೋಜಿಸಲಾಗಿದೆ. ಅ.17, 18, 20 ಮತ್ತು 21ರಂದು ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನ ನಡೆಯಲಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
3,500 ಡ್ರೋನ್‍ಗಳನ್ನು ಏಕಕಾಲದಲ್ಲಿ ಬಳಸಿಕೊಂಡು ರಾಷ್ಟ್ರಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಆಕಾಶದಲ್ಲಿ ಮೂಡಿಸಿ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುವ ಯೋಜನೆಯೂ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ; ಕರ್ನಾಟಕದ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ದೇಶ-ವಿದೇಶಕ್ಕೆ ಪರಿಚಯಿಸುವ ದೊಡ್ಡ ವೇದಿಕೆಯಾಗಿದೆ. ಈ ಬಾರಿ ದೀಪಾಲಂಕಾರವನ್ನು ಮತ್ತಷ್ಟು ವಿಶಾಲ ಮತ್ತು ಆಕರ್ಷಕವಾಗಿ ರೂಪಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪ್ರತಿಕೃತಿಗಳೊಂದಿಗೆ ಡ್ರೋನ್ ಪ್ರದರ್ಶನವೂ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಜಾರ್ಜ್ ಹೇಳಿದ್ದಾರೆ.
ದಸರಾ ದೀಪಾಲಂಕಾರಕ್ಕಾಗಿ ತಾತ್ಕಾಲಿಕವಾಗಿ 3,106 ಕೆವಿಎ ವಿದ್ಯುತ್ ಭಾರ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 2,60,920 ಯೂನಿಟ್ ವಿದ್ಯುತ್ ಬಳಕೆ ಅಂದಾಜಿಸಲಾಗಿದೆ. ದೀಪಾಲಂಕಾರ ಕಾಮಗಾರಿಗೆ 2.50 ಕೋಟಿ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ ಎಂದು ಕೆ.ಜೆ.ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






