ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ ಸಚಿವ ಚಲುವರಾಯಸ್ವಾಮಿ

ಹೊಸದಿಲ್ಲಿ : ದಿಲ್ಲಿ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಜಲ ಸಮಾವೇಶ ಹಾಗೂ ಕೇಂದ್ರ ಸಚಿವರ ಭೇಟಿ, ಜಲಸಂಪನ್ಮೂಲ ಇಲಾಖಾ ಅಧಿಕಾರಿಗಳೊಂದಿಗಿನ ಸಭೆಗಳ ನಿಮಿತ್ತ ದಿಲ್ಲಿ ಪ್ರವಾಸದಲ್ಲಿರುವ ಚಲುವರಾಯಸ್ವಾಮಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವರಿಷ್ಠರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಸಚಿವ ಚಲುವರಾಯಸ್ವಾಮಿ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಭೇಟಿ ವೇಳೆ ಸರಕಾರದ ಅಭಿವೃದ್ಧಿ ಯೋಜನೆಗಳ ಪ್ರಗತಿ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ನಾಯಕರೊಂದಿಗೆ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಸಂಪುಟ ಪುನರಚನೆ ಸಂದರ್ಭದಲ್ಲಿ ಚಲುವರಾಯಸ್ವಾಮಿ ಅವರನ್ನು ಕೈಬಿಟ್ಟು ಆ ಸ್ಥಾನಕ್ಕೆ ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ.ಕೃಷ್ಣಪ್ಪ ಅವರನ್ನು ಸೇರ್ಪಡೆ ಮಾಡಲಿದ್ದಾರೆಂಬ ವದಂತಿಗಳ ಬೆನ್ನಲ್ಲೇ ಚಲುವರಾಯಸ್ವಾಮಿ ವರಿಷ್ಟರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೆ, ಏನು ಚರ್ಚೆ ನಡೆದಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.






