ಕುಮಾರಸ್ವಾಮಿ ಒಬ್ಬ ಕೇಂದ್ರ ಸಚಿವರು; ಆದರೆ, ಅವರು ತಮ್ಮ ಕೆಲಸ ಮಾಡುತ್ತಿಲ್ಲ : ಎನ್.ಚಲುವರಾಯಸ್ವಾಮಿ

ಬೆಂಗಳೂರು : ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗೆ ತಲೆ ಕೆಟ್ಟಿದೆಯೇ? ಪದೇ ಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಯನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟೆಸ್ಟಿಂಗ್ ಮಿಷನ್ ಹಾಕಬೇಕು ಎಂದು ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಪಕ್ಷದ ಹಿರಿಯ ನಾಯಕರಿಗೆ ಸ್ಟಿಂಗ್ ಆಪರೇಷನ್ ಮಾಡಿಸಲು ಡಿಕೆಶಿಗೆ ತಲೆ ಕೆಟ್ಟಿದೆಯಾ? ಡಿಕೆಶಿ ಸಿಎಂ ಆದ ದಿನದಿಂದ ಕುಮಾರಸ್ವಾಮಿ ನಿದ್ದೆ ಮಾಡಿದ್ದಾರೋ ಇಲ್ಲವೋ ಎಂದು ತಿಳಿಯಲು ಅವರಿಗೆ ಟೆಸ್ಟಿಂಗ್ ಮೆಷಿನ್ ಹಾಕಬೇಕು. ಕುಮಾರಸ್ವಾಮಿ ಮಾಡುತ್ತಿರುವುದನ್ನು ನೋಡಿ ಜನರಿಗೆ ಅಸಹ್ಯ ಹುಟ್ಟುತ್ತಿದೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಒಬ್ಬ ಕೇಂದ್ರ ಸಚಿವರು. ಆದರೆ, ಅವರು ತಮ್ಮ ಕೆಲಸ ಮಾಡುತ್ತಿಲ್ಲ ಎಂಬುದು ಅವರ ಹೇಳಿಕೆಗಳಿಂದಲೇ ಜನರಿಗೆ ಸಾಬೀತಾಗಿದೆ. ಈ ಸ್ಟಿಂಗ್ ಬಗ್ಗೆ ಜನರಿಗೆ ಏನಾಗಬೇಕಿದೆ? ಇಂತಹವುಗಳೆಲ್ಲ ಜನರಿಗೆ ಬೇಕಿಲ್ಲ. ಅಂತಹ ಸ್ಟಿಂಗ್ ನಡೆದು ಬಹಿರಂಗಗೊಂಡರೆ ತಪ್ಪಿತಸ್ಥರ ಮೇಲೆ ಕ್ರಮವಾಗಲಿದೆ, ತನಿಖೆಯೂ ನಡೆಯಲಿದೆ ಎಂದು ಅವರು ಹೇಳಿದರು.
ಯಾರ ಮೇಲೆ ಬೇಕಿದ್ದರೂ ಸ್ಟಿಂಗ್ ನಡೆಯಲಿ. ಕೇಂದ್ರ ಸರಕಾರದ ಬಳಿಯೇ ಸಿಬಿಐ ಇದೆ, ಆ ಮೂಲಕ ತನಿಖೆ ನಡೆಸಲಿ. ಇಂತಹವುಗಳನ್ನೆಲ್ಲ ಸರಕಾರ ಕಣ್ಣುಮುಚ್ಚಿ ನೋಡಿಕೊಂಡು ಕೂರುವುದಿಲ್ಲ ಎಂದು ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.
ಪ್ರಜ್ವಲ್ ರೇವಣ್ಣ ಪಾಪವಂತೆ!: ಕುಮಾರಸ್ವಾಮಿ ಅನಾವಶ್ಯಕವಾಗಿ ಸ್ಟಿಂಗ್ ವಿಷಯ ಎಳೆದು ತಂದಿದ್ದಾರೆ. ಇವರ ಪ್ರಕಾರ ಪ್ರಜ್ವಲ್ ರೇವಣ್ಣ ಪಾಪವಂತೆ! ಹಾಸನದ ಪೆನ್ಡ್ರೈವ್ ಮಾಡಿಸಿದ್ದು ಯಾರು ಎಂದು ಇವರು ಕೇಳುತ್ತಾರೆ. ಪೆನ್ಡ್ರೈವ್ ಹಂಚಿದವರ ಬಗ್ಗೆ ಇವರು ದೂರು ನೀಡಲಿ, ಕ್ರಮ ಕೈಗೊಳ್ಳೋಣ. ಅವರು ದೂರು ನೀಡಿದರೆ ಈ ಬಗ್ಗೆ ತನಿಖೆ ನಡೆಸುವಂತೆ ನಾನೇ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಪ್ರಜ್ವಲ್ ರೇವಣ್ಣ ಬಗ್ಗೆ ಇವರಿಗೆ ಸಹಾನುಭೂತಿ ಇದೆ. ಆದರೆ ಅವನಿಂದ ಅನ್ಯಾಯಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ಬಗ್ಗೆ ಸಹಾನುಭೂತಿ ಇಲ್ಲ. ಆ ಸಂತ್ರಸ್ತ ಹೆಣ್ಣುಮಕ್ಕಳ ಬದುಕೇನು? ಅವರೆಲ್ಲ ಎಲ್ಲಿದ್ದಾರೆ? ಇಂದು ಅವರ ಕುಟುಂಬದ ಪರಿಸ್ಥಿತಿ ಏನಾಗಿದೆ? ಅವರ ವೈಯಕ್ತಿಕ ಬದುಕೇನು? ಅವರು ಅನುಭವಿಸುತ್ತಿರುವ ನರಕ ಇವರಿಗೆ ಗೊತ್ತಿದೆಯೇ? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ಹಾಸನದ ವಿಚಾರ ಎತ್ತುವುದು ಅಸಭ್ಯ ಎಂದು ನಾವೇ ಸುಮ್ಮನಿದ್ದರೆ, ಇವರೇ ಮತ್ತೆ ಮತ್ತೆ ಅದನ್ನೇ ಪ್ರಸ್ತಾಪಿಸುತ್ತಾರೆ. ಕುಮಾರಸ್ವಾಮಿ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಬರೀ ಇಂತಹ ಅಸಭ್ಯ ವಿಚಾರಗಳನ್ನೇ ಮಾತನಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ನಾಯಕತ್ವ, ಅವರು ನಡೆದು ಬಂದ ದಾರಿ ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಯಾರೋ ಒಬ್ಬರು ಮೈಕ್ ಹಿಡಿದು ಅವರ ಹೆಸರನ್ನು ಹೇಳಿಸಿಬಿಟ್ಟರೆ ಆಗುತ್ತದೆಯೇ? ಸಿದ್ದರಾಮಯ್ಯನವರ ವ್ಯಕ್ತಿತ್ವ ಹಾಳುಮಾಡಲು ಇವರ ಬಳಿ ಏನು ಸಾಕ್ಷ್ಯವಿದೆ? ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ಕುಮಾರಸ್ವಾಮಿ ತರಹದ ಚರಿತ್ರೆ ಸಿದ್ದರಾಮಯ್ಯನವರದ್ದೂ ಆಗಿದ್ದರೆ ನಾವು ಅದನ್ನು ಒಪ್ಪಿಕೊಳ್ಳುತ್ತಿದ್ದೆವು. ನಮ್ಮ ತಪ್ಪಿದ್ದರೂ ಒಪ್ಪುತ್ತೇವೆ, ಸಿದ್ದರಾಮಯ್ಯನವರ ತಪ್ಪಿದ್ದರೂ ಒಪ್ಪುತ್ತೇವೆ. ಯಾರನ್ನೋ ಕರೆದುಕೊಂಡು ಬಂದು ಕೂರಿಸಿ ಪ್ರಚೋದಿಸಿ ಹೇಳಿಸಿದರೆ ಹೇಳಿಬಿಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಬಾರದ ಆರೋಪ ಈಗೇಕೆ ಬರುತ್ತದೆ? ಇದು ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಟಿಸಲು ಕುಮಾರಸ್ವಾಮಿ ಮಾಡುತ್ತಿರುವ ಹುನ್ನಾರ ಎಂದು ಅವರು ಆರೋಪಿಸಿದರು.
ಜೆಡಿಎಸ್ನವರನ್ನು ಬಿಟ್ಟು ಇದನ್ನು ಮಾಡಲು ಇನ್ಯಾರಿಗೆ ಸಾಧ್ಯ? ಹಿಂದೆ ಸಿದ್ದರಾಮಯ್ಯರನ್ನು ಪಕ್ಷದಿಂದ ಹೊರಹಾಕಿದಾಗ, ಅನೇಕ ಬಾರಿ ಹೀಯಾಳಿಸಿದಾಗ ಇಲ್ಲದ ಅನುಕಂಪ ಇಂದು ಕುಮಾರಸ್ವಾಮಿಗೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ. ನಾಳೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಸೇರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.






