ಸಮಸ್ಯೆಗಳಿಗೆ ಉಪಹಾರ ಕೂಟ ಪರಿಹಾರವೇ?: ಎನ್.ರವಿಕುಮಾರ್

ಬೆಂಗಳೂರು: ‘ನಾಟಿಕೋಳಿ ಸಾರ್ ಮಾಡಿಸುತ್ತೀರಿ?, ಕುರಿ ಕೊಯಿಸುತ್ತೀರಾ? ಅಥವಾ ಇಡ್ಲಿ ವಡಾ, ಸಾಂಬಾರ್ ಅಥವಾ ಉಪ್ಪಿಟ್ಟಿನ ಸಿಂಪಲ್ ಉಪಹಾರಕ್ಕೆ ಮುಗಿಸುತ್ತೀರಾ?. ಕರ್ನಾಟಕದ ಸಮಸ್ಯೆ ಉಪಹಾರದಲ್ಲಿ ಮುಗಿಯುತ್ತದೆಯೇ? ಎಂದು ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನ”ದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಿನ್ನೆಯಿಂದ ನಾಟಿಕೋಳಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ ಎಲ್ಲ ಸಮಸ್ಯೆ ಪರಿಹಾರ ಆಗುವುದಾದರೆ ಎಲ್ಲರಿಗೂ ನಾಟಿಕೋಳಿ ಕೊಟ್ಟು ಬಿಡಬಹುದು. ನಾಟಿಕೋಳಿಯಲ್ಲಿ ಪರಿಹಾರ ಇದೆಯೇ? ಎಂದು ಕೇಳಿದರು.
ರಾಜ್ಯದಲ್ಲಿ ರೈತರ ಸಮಸ್ಯೆ, ರಸ್ತೆ ಗುಂಡಿ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳಿವೆ. ರೈತರ ಹೋರಾಟ, ಶಿಕ್ಷಕರ-ಅತಿಥಿ ಉಪನ್ಯಾಸಕರ ಹೋರಾಟ ನಡೆಯುತ್ತಿದೆ. ಸರಣಿ ದರೋಡೆಗಳು ನಡೆಯುತ್ತಿವೆ. ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇವುಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು.
ರೈತರ ಸಮಸ್ಯೆಗಳನ್ನು, ಬೆಂಗಳೂರಿನ ರಸ್ತೆ ಸಮಸ್ಯೆ ಉಪಹಾರದಲ್ಲಿ ಮುಗಿಸಿದ್ದೀರಾ? ಕೇಂದ್ರ ಸರಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಪ್ರಕಟಿಸಿ ಅನೇಕ ತಿಂಗಳಾಗಿದೆ. ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2,400ರೂ. ಘೋಷಿಸಿದ್ದರೂ ಖರೀದಿ ಕೇಂದ್ರಗಳನ್ನು ಈ ಸರಕಾರ ತೆರೆದಿಲ್ಲ ಎಂದು ರವಿಕುಮಾರ್ ಟೀಕಿಸಿದರು.







