‘ಗುಲಾಬಿ ಮಾರ್ಗ’ದ ಮೆಟ್ರೋ ಮೊದಲ ಹಂತ ನ.13ಕ್ಕೆ ಪ್ರಧಾನಿ ಲೋಕಾರ್ಪಣೆ: 7.5 ಕಿ.ಮೀ. ಉದ್ದದ ಆರು ನಿಲ್ದಾಣಗಳ ಮಾರ್ಗ

ನರೇಂದ್ರ ಮೋದಿ | Photo Credit : PTI
ಬೆಂಗಳೂರು : ಬೆಂಗಳೂರು ನಗರದ ಬಹುನಿರೀಕ್ಷಿತ ‘ಗುಲಾಬಿ ಮಾರ್ಗ’ದ ಮೊದಲ ಹಂತ ನಮ್ಮ ಮೆಟ್ರೋ ರೈಲ್ವೆ ಮಾರ್ಗವನ್ನು ನ.13ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಇಲ್ಲಿನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆಯ ವರೆಗಿನ 7.5 ಕಿಲೋ ಮೀಟರ್ ಉದ್ದದ ಈ ಮಾರ್ಗದ ನಮ್ಮ ಮೆಟ್ರೋ ರೈಲ್ವೆ ಯೋಜನೆ ಇದೀಗ ಸಂಚಾರಕ್ಕೆ ಸಿದ್ಧವಾಗಿದೆ.
ಒಟ್ಟು 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗವು ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಉತ್ತರ ಬೆಂಗಳೂರಿನ ನಾಗವಾರದ ವರೆಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಎತ್ತರಿಸಿದ ಹಾಗೂ ಸುರಂಗ ಮಾರ್ಗಗಳಿದ್ದು, ಒಟ್ಟು 18 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆ-ರೆವರೆಗಿನ ಆರು ನಿಲ್ದಾಣಗಳು ಮೊದಲಿಗೆ ಕಾರ್ಯಾರಂಭಿಸಲಿವೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ನಿಲ್ದಾಣಗಳು ಈ ಹಂತದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಲಿವೆ.
ಈ ಮೂಲಕ ಬನ್ನೇರುಘಟ್ಟ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಮೆಟ್ರೋ ಮೂಲಕ ಸಂಚರಿಸುವ ಮತ್ತೊಂದು ಅವಕಾಶ ದೊರೆಯಲಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇರುವುದರಿಂದ ಪ್ರಮುಖ ರಸ್ತೆಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಅದರಲ್ಲೂ ಬನ್ನೇರುಘಟ್ಟ ರಸ್ತೆ, ಜೆ.ಪಿ.ನಗರ ಸೇರಿದಂತೆ ಬೆಂಗಳೂರು ದಕ್ಷಿಣದ ಹಲವು ಪ್ರದೇಶಗಳಲ್ಲಿ ವಾಹನ ಸವಾರರು ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗುಲಾಬಿ ಮಾರ್ಗದ ಮೊದಲ ಹಂತ ಆರಂಭವಾಗುತ್ತಿರುವುದು ಈ ಭಾಗದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
‘ನಮ್ಮ ಮೆಟ್ರೋ ಜಾಲವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ. 2027ರ ವೇಳೆಗೆ ಮೆಟ್ರೋ ಸಂಪರ್ಕ ಜಾಲವನ್ನು 170 ಕಿ.ಮೀ.ಗೆ ಹೆಚ್ಚಿಸುವ ಉದ್ದೇಶವಿದೆ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.






