ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾದ ಅನ್ಯಾಯ ಲಘುವಾಗಿ ಏಕೆ ಪರಿಗಣಿಸುತ್ತೀರಿ? : ನಾರಾಯಣಗೌಡ ಪ್ರಶ್ನೆ

ಬೆಂಗಳೂರು : ಒಬ್ಬ ವಿದ್ಯಾರ್ಥಿಗೆ ಅನ್ಯಾಯವಾದರೂ ಅದು ಸರಿಯಲ್ಲ. ಹೀಗಿರುವಾಗ 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ನೀವು ಯಾಕೆ ಇಷ್ಟು ಲಘುವಾಗಿ ಪರಿಗಣಿಸುತ್ತಿದ್ದೀರಿ? ಎಂದು ಸಿಎಂ ಪ್ರಧಾನ ಕಾರ್ಯದರ್ಶಿಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಮಂಗಳವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, 384 ಪ್ರೊಬೇಷನರಿ ಗೆಜೆಟೆಡ್ ಅಧಿಕಾರಿಗಳ ಹುದ್ದೆಗಾಗಿ ನಡೆದ ಪರೀಕ್ಷೆಯ ಅನ್ಯಾಯವನ್ನು ಸರಿಪಡಿಸುವ ಕಾರ್ಯವನ್ನು ಸರಕಾರ ಇಷ್ಟು ಹೊತ್ತಿಗೆ ಮಾಡಬೇಕಿತ್ತು. ಆದರೆ, ತಾವೇ ಇದಕ್ಕೆ ಅಡ್ಡಿಯಾಗಿದ್ದೀರಿ ಎಂಬುದು ಮೊದಲಿನಿಂದ ವಿದ್ಯಾರ್ಥಿಗಳ ಅಭಿಮತವಾಗಿತ್ತು. ಮರು ಪರೀಕ್ಷೆಯ ಪ್ರಶ್ನೆಪತ್ರಿಕೆ 1ರಲ್ಲಿ ಕನ್ನಡ ಮಾಧ್ಯಮದ ಪ್ರಶ್ನೆಪತ್ರಿಕೆಯಲ್ಲಿ ಮಾತ್ರ 45 ತಪ್ಪುಗಳಾಗಿವೆ. ಪ್ರಶ್ನೆ ಪತ್ರಿಕೆ 2ರಲ್ಲಿ ಒಟ್ಟು 35 ತಪ್ಪುಗಳಾಗಿವೆ. ಒಟ್ಟು 80 ಕಡೆ ತಪ್ಪುಗಳಾಗಿವೆ. ಇದಕ್ಕಿಂತ ಬೇಜವಾಬ್ದಾರಿ ಇನ್ನೇನಿರಲು ಸಾಧ್ಯ? ಒಟ್ಟು 80 ತಪ್ಪುಗಳ ಎಲ್ಲೆಲ್ಲಿ ಆಗಿವೆ, ಅವುಗಳು ಕನ್ನಡದಲ್ಲಿ ಹೇಗಿರಬೇಕಿತ್ತು ಎಂಬುದರ ಪೂರ್ಣ ವಿವರಗಳು ನನ್ನ ಬಳಿ ಇದೆ ಎಂದು ಹೇಳಿದ್ದಾರೆ.
ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಾಗಿರಲಿ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಾಗಿರಲಿ ಅವರು ಆಡಳಿತ ಸೇವೆಗೆ ನೇಮಕಗೊಂಡ ನಂತರ ವ್ಯವಹರಿಸಬೇಕಿರುವುದು ಕನ್ನಡದಲ್ಲಿಯೇ. ಯಾಕೆಂದರೆ ಕನ್ನಡವೇ ಕರ್ನಾಟಕದ ಆಡಳಿತ ಭಾಷೆ. ಇದು ಸಣ್ಣ ಮಕ್ಕಳಿಗೂ ಗೊತ್ತಿರಬೇಕಾದ ಸಾಮಾನ್ಯ ಜ್ಞಾನ. ಹೀಗಿರುವ ಕೆಪಿಎಸ್‌ಸಿ ಯಾಕೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕನ್ನಡಕ್ಕೆ ಕೆಟ್ಟದಾಗಿ ಅನುವಾದಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.





