ʼರೈಲ್ವೆ ಪರೀಕ್ಷೆಯಲ್ಲಿ ಕನ್ನಡ ನಿರಾಕರಣೆʼ ಕನ್ನಡಿಗರ ಹಕ್ಕುಗಳ ಮೇಲಿನ ನೇರ ಆಕ್ರಮಣ : ನಾರಾಯಣಗೌಡ

ಬೆಂಗಳೂರು : ‘ಕನ್ನಡವನ್ನು ಕೈಬಿಟ್ಟು ಪರೀಕ್ಷೆಗಳನ್ನು ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದು ಕನ್ನಡಿಗರ ಸ್ವಾಭಿಮಾನವನ್ನು ಮತ್ತೆ ಕೆಣಕುವಂತಹ ಅಪಮಾನಕಾರಿ ಕ್ರಮವಾಗಿದೆ. ಇದು ಕೇವಲ ಭಾಷಾ ಅನ್ಯಾಯವಲ್ಲ, ಕನ್ನಡಿಗರ ಹಕ್ಕುಗಳ ಮೇಲಿನ ನೇರ ಆಕ್ರಮಣವಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂದು ಕರವೇ ದೊಡ್ಡಮಟ್ಟದ ಹೋರಾಟಗಳನ್ನು ನಡೆಸಿತ್ತು. ಅದರ ಫಲವಾಗಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಕೈಬಿಡುವ ಪ್ರಯತ್ನಗಳನ್ನು ಕರವೇ ಗಮನಿಸುತ್ತಿದೆ’ ಎಂದಿದ್ದಾರೆ.
‘ಕೇವಲ ಕೆಲವು ದಿನಗಳ ಹಿಂದೆಯಷ್ಟೇ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ನಾವು ಗಟ್ಟಿಯಾಗಿ ಒತ್ತಾಯಿಸಿದ್ದೆವು. ರೈಲ್ವೆ ಸಚಿವ ಸೋಮಣ್ಣನವರೂ ಸಹ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚಿಸಿದ್ದರು. ರೈಲ್ವೆಯ ಯಾವುದೇ ಪರೀಕ್ಷೆಯಿರಲಿ, ಅದನ್ನು ಕನ್ನಡದಲ್ಲೂ ಕಡ್ಡಾಯವಾಗಿ ನಡೆಸಬೇಕು. ಕನ್ನಡಿಗರು ಇನ್ನೊಂದು ಭಾಷೆಯನ್ನು ಕಲಿತು ಪರೀಕ್ಷೆ ಬರೆಯಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಕರವೇ ಎಂದಿಗೂ ಒಪ್ಪುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಈ ಆದೇಶವನ್ನು ತಕ್ಷಣ ಹಿಂಪಡೆಯದಿದ್ದರೆ, ಕರವೇ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳನ್ನು ಆಯೋಜಿಸಲಿದೆ. ರೈಲ್ವೆ ಕಚೇರಿಗಳ ಮುಂದೆ ಧರಣಿ, ಬಂದ್, ರಸ್ತೆ ತಡೆ, ಹಾಗೂ ಅಗತ್ಯವಿದ್ದರೆ ಹೋರಾಟದ ತೀವ್ರ ಸ್ವರೂಪಗಳನ್ನು ತೆಗೆದುಕೊಳ್ಳಲು ಸಿದ್ಧವಿದೆ. ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸುವಲ್ಲಿ ಕರವೇ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.







