ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿ ಅಕ್ರಮ ಪ್ರಕರಣ : ಸರಕಾರಕ್ಕೆ 3 ಸಂಪುಟಗಳ ಪರಿಶೀಲನಾ ವರದಿ ಸಲ್ಲಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ನಾರಾಯಣಪುರ ಬಲದಂಡೆ ಕಾಲುವೆಯ ಉಪ ಕಾಲುವೆಗಳ ಆಧುನೀಕರಣ ಕಾಮಗಾರಿಯಲ್ಲಿ ಅಕ್ರಮ ಆರೋಪ ಪ್ರಕರಣ ಸಂಬಂಧ ಉನ್ನತ ಮಟ್ಟದ ಸಮಿತಿಯು, ತನ್ನ ಪರಿಶೀಲನಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿದೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವಿಚಾರಣಾ ಆಯೋಗವು ತನಿಖೆ ನಡೆಸಿ ನೀಡಿದ್ದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಉನ್ನತ ಮಟ್ಟದ ಸಮಿತಿಯು, ತನ್ನ ಪರಿಶೀಲನಾ ವರದಿಯನ್ನು ಶುಕ್ರವಾರ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಿತು. ರಾಜ್ಯ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರ ಅಧ್ಯಕ್ಷತೆಯಲ್ಲಿ ಒಟ್ಟು ಆರು ಮಂದಿ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯು ಸಿದ್ಧಪಡಿಸಿರುವ ಒಟ್ಟು ಮೂರು ಸಂಪುಟಗಳ ಪರಿಶೀಲನಾ ವರದಿಯನ್ನು ಸಚಿವರಿಗೆ ಹಸ್ತಾಂತರಿಸಲಾಯಿತು.
ಏನಿದು ವರದಿ? :
2019ರ ಜುಲೈ 26ರಿಂದ 2023ರ ಮಾರ್ಚ್ 31ರ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಸರಕಾರದ ಐದು ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿನ ಲಂಚ ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಲಾಗಿತ್ತು. ಇದರ ಭಾಗವಾಗಿ ರಾಯಚೂರು ಜಿಲ್ಲೆಯ ನಾರಾಯಣಪುರ ಬಲದಂಡೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ 1ರಿಂದ 18ರವರೆಗಿನ ಉಪ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗವು ತನಿಖೆ ನಡೆಸಿ, ಕಳೆದ ವರ್ಷದ ಮಾರ್ಚ್ 12ರಂದು ಸರಕಾರಕ್ಕೆ ವರದಿ ಸಲ್ಲಿಸಿತ್ತು.
ಈ ವರದಿಯನ್ನು ಆಧರಿಸಿ ವಿವರವಾಗಿ ಪರಿಶೀಲಿಸಿ ವರದಿ ನೀಡಲು ನಿವೃತ್ತ ಅಧಿಕಾರಿ ಎಸ್.ಆರ್.ಉಮಾಶಂಕರ್ ಅವರ ನೇತೃತ್ವದಲ್ಲಿ ಕಳೆದ ವರ್ಷದ ಆಗಸ್ಟ್ 19ರಂದು ರಾಜ್ಯ ಸರಕಾರವು ಪರಿಶೀಲನಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ತನ್ನ ಅಂತಿಮ ಪರಿಶೀಲನಾ ವರದಿಯನ್ನು ಶುಕ್ರವಾರ ಜಲಸಂಪನ್ಮೂಲ ಸಚಿವರಿಗೆ ಮೂರು ಸಂಪುಟಗಳಲ್ಲಿ ಸಲ್ಲಿಸಿದೆ.






