ನಾಳೆಯಿಂದ ಜ.19ರ ವರೆಗೆ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ : ಕೆ.ಗೋವಿಂದರಾಜ್

ಬೆಂಗಳೂರು : ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ(ಜ.17) ಜ.19ರ ವರೆಗೆ ಬಾಸ್ಕೆಟ್‍ಬಾಲ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ 4ನೇ ಸೀನಿಯರ್ 3x3 ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿ ನಡೆಯಲಿದೆ ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ಗಳ ಅಧ್ಯಕ್ಷ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಭಾರತದ ಎಲ್ಲೆಡೆಯಿಂದ 56 (30 ಪುರುಷರ ಮತ್ತು 26 ಮಹಿಳೆಯರ) ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇವುಗಳಲ್ಲಿ ಪುರುಷರ ಮತ್ತು ಮಹಿಳೆಯರ ರೈಲ್ವೇಸ್ ತಂಡಗಳು, ಪುರುಷರ ವಿಭಾಗದಲ್ಲಿ ಸರ್ವೀಸಸ್ ತಂಡ ಸೇರಿವೆ ಎಂದರು.
ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್ ಶಿಪ್‍ಗಳಲ್ಲಿ ಬೆಂಗಳೂರು ಗಮನಾರ್ಹ ಪಾತ್ರ ವಹಿಸುತ್ತದೆ. ಕ್ರೀಡಾ ತಾಣವಾಗಿ ಬೆಂಗಳೂರಿನ ಖ್ಯಾತಿ, ಗೌರವಗಳು ಹೆಚ್ಚುತ್ತಿರುವುದು ಕೂಡ ಅಂತಾರಾಷ್ಟ್ರೀಯ ಆಟಗಾರರು ಮತ್ತು ತಂಡಗಳನ್ನು ಆಕರ್ಷಿಸುತ್ತದೆಯಲ್ಲದೇ ಇದರೊಂದಿಗೆ ಭಾರತದಲ್ಲಿ ಬಾಸ್ಕೆಟ್‍ಬಾಲ್‍ನ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಡಾ.ಕೆ.ಗೋವಿಂದರಾಜ್ ಹೇಳಿದರು.
ಈ ಚಾಂಪಿಯನ್‍ಶಿಪ್‍ಗಳನ್ನು ನಿರಂತರವಾಗಿ ಆಯೋಜಿಸುವುದು ಮತ್ತು ಬೆಂಬಲಿಸುವುದರಿಂದ, ನಾವು ಕೇವಲ ಬಾಸ್ಕೆಟ್‍ಬಾಲ್‍ಗೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೇ, ಕ್ರೀಡಾಪಟುಗಳನ್ನು ಪೋಷಿಸುತ್ತೇವೆ. ಜೊತೆಗೆ ಭಾರತದಲ್ಲಿ ಬಾಸ್ಕೆಟ್‍ಬಾಲ್ ಪರಿಸರ ವ್ಯವಸ್ಥೆಯನ್ನು ದೃಢಪಡಿಸುತ್ತೇವೆ ಎಂದು ಡಾ.ಕೆ.ಗೋವಿಂದರಾಜ್ ತಿಳಿಸಿದರು.
ಕರ್ನಾಟಕ ಪುರುಷರ ತಂಡದಲ್ಲಿ ಪ್ರತ್ಯಾನ್ಷು ತೋಮರ್, ಶಶಾಂಕ್ ರೈ, ಅಭಿಷೇಕ್ ಗೌಡ ಮತ್ತು ಏರಾನ್ ಎ. ಇರುತ್ತಾರೆ. ಕರ್ನಾಟಕ ಮಹಿಳೆಯರ ತಂಡದಲ್ಲಿ ಬಾಂಧವ್ಯ ಎಚ್.ಎಂ., ಮೇಖಲಾ ಗೌಡ, ಸದಿಯ ಸೆಲ್ವ ಕುಮಾರ್ ಮತ್ತು ಪ್ರೀತಿ ಮಲ್ಲಪ್ಪ ಇರುತ್ತಾರೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಹಲವಾರು ಅಂತಾರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರರು ಭಾಗವಹಿಸಲಿರುವುದು ಪ್ರಮುಖ ಆಕರ್ಷಣೆಯಾಗಿದೆ ಎಂದು ಡಾ.ಕೆ.ಗೋವಿಂದರಾಜ್ ಹೇಳಿದರು.
ಬಹು ನಿರೀಕ್ಷಿತ ಈ ಚಾಂಪಿಯನ್ ಶಿಪ್ ಪಂದ್ಯಾವಳಿಯು ಕೌಶಲ್ಯ, ದೃಢನಿಶ್ಚಯ ಅಲ್ಲದೇ ಕ್ರೀಡಾ ಮನೋಭಾವಗಳ ಪ್ರದರ್ಶನವಾಗುವ ಭರವಸೆ ನೀಡಿದೆ. ಆಟಗಾರರು ಮತ್ತು ಪ್ರೇಕ್ಷಕರಿಗೆ ಸಾಟಿಯಿಲ್ಲದ ಅನುಭವ ಪೂರೈಸಲಿದೆ. ಈ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಡಾ.ಕೆ.ಗೋವಿಂದರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಬಾಸ್ಕೆಟ್‍ಬಾಲ್ ತಂಡದ ಮಾಜಿ ಕ್ಯಾಪ್ಟನ್ ಎಲ್.ಆರ್.ರಾಜನ್, ಭಾರತೀಯ ಬಾಸ್ಕೆಟ್‍ಬಾಲ್ ಫೆಡರೇಶನ್‍ನ ತಾಂತ್ರಿಕ ಆಯೋಗದ ಅಧ್ಯಕ್ಷ ನಾರ್ಮನ್ ಐಸಾಕ್ ಉಪಸ್ಥಿತರಿದ್ದರು.







