ಕೃಷಿ ಲಾಭದಾಯಕವಾಗುವಂತೆ ಪರಿವರ್ತಿಸಲು ಕೃಷಿ ವಿವಿಗಳು ನೆರವಾಗಲಿ : ಎನ್.ಚಲುವರಾಯಸ್ವಾಮಿ

ಬೆಂಗಳೂರು : ರೈತರು ವೈಜ್ಞಾನಿಕ ಹಾಗೂ ಸಮಗ್ರ ಬೇಸಾಯದ ಬಗ್ಗೆ ಹೆಚ್ಚು ಗಮನ ಹರಿಸಿ, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು. ಇದಕ್ಕೆ ಕೃಷಿ ವಿಶ್ವವಿದ್ಯಾಲಯಗಳು ನೆರವಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದ್ದಾರೆ.
ಗುರುವಾರ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಆವರಣದಲ್ಲಿ ‘ಸಮೃದ್ಧ ಕೃಷಿ-ವಿಕಸಿತ ಭಾರತ: ನೆಲ, ಜಲ ಮತ್ತು ಬೆಳೆ’ ಶೀರ್ಷಿಕೆ ಅಡಿಯಲ್ಲಿ ನಡೆಯುತ್ತಿರುವ ‘ಕೃಷಿ ಮೇಳ-2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಕೃಷಿ ವಿವಿಯು ಪ್ರತಿವರ್ಷ ಅತ್ಯುತ್ತಮ ಕೃಷಿ ಮೇಳ ಮತ್ತು ಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿದ್ದು, ಉತ್ತಮ ತಳಿಗಳನ್ನು ಈ ಬಾರಿ ಬಿಡುಗಡೆಗೊಳಿಸಿದೆ. ಕೃಷಿ ವಿವಿಗಳು ಇಂತಹ ಕೆಲಸಗಳನ್ನು ಮಾಡಿ, ರೈತರಿಗೆ ಕೊಡುಗೆ ನೀಡಬೇಕು. ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕು ಎಂದು ಅವರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ, ರೈತರಿಗೆ ಉತ್ತಮ ಆದಾಯ ನೀಡಲು ಹಲವು ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳನ್ನು ಒದಗಿಸುತ್ತಿವೆ. ಈ ವರ್ಷ 5 ಸಾವಿರ ಉದ್ಯಮಿಗಳಿಗೆ ಕೆಪೆಕ್‍ನಿಂದ 15 ಲಕ್ಷ ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದ್ದು, ರಾಜ್ಯ ಸರಕಾರದಿಂದ 9 ಲಕ್ಷ ರೂ. ಹಾಗೂ ಕೇಂದ್ರ ಸರಕಾರದಿಂದ ಉಳಿದ 6 ಲಕ್ಷ ರೂ. ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ದೊಡ್ಡಮಟ್ಟದ ಕಟಾವು ಯಂತ್ರೋಪಕರಣಗಳ ಖರೀದಿಗಾಗಿ ಸಾಮಾನ್ಯ ವರ್ಗ ಕೃಷಿಕರಿಗೆ 40 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ 50 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತಿದೆ. ಅದೇ ರೀತಿ ಕೃಷಿ ಹೊಂಡಗಳ ನಿರ್ಮಾಣಕ್ಕೂ ಗರಿಷ್ಠ ಮಟ್ಟದ ಸಹಾಯಧನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ರೈತರ ಜೀವನವನ್ನು ಅಭಿವೃದ್ಧಿ ಮಾಡುವುದು ನಮ್ಮ ಹೊಣೆಯಾಗಿದ್ದು, ಕೃಷಿ ಸಂಶೋಧನೆ, ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಜ್ಯದಲ್ಲಿ ಇಳುವರಿಯೂ ವೃದ್ಧಿಯಾಗಬೇಕು. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಸಂಶೋಧನೆಗಳ ವೈಜ್ಞಾನಿಕ ಅನುಷ್ಠಾನ, ಬರ ನಿರ್ವಹಣೆ ಮಾಡಿದಾಗ ಮಾತ್ರ ಸುಸ್ಥಿರ ಕೃಷಿ ಸಾಧ್ಯ ಎಂದು ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಫಿಲಿಪೈನ್ಸ್ ದೇಶಕ್ಕೆ ಪ್ರವಾಸ ಕೈಗೊಂಡು ಮನಿಲಾದಲ್ಲಿರುವ ಅಂತರಾಷ್ಟ್ರೀಯ ಭತ್ತ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಫಿಲಿಪೈನ್ಸ್ ದೇಶದಲ್ಲಿ ಸುಮಾರು 25 ರಿಂದ 30 ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ, ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದಾರೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲೂ ನಮ್ಮ ವಿಜ್ಞಾನಿಗಳು ರೈತರಿಗೆ ಇಂತಹ ತಳಿ ಸಂಶೋಧಿಸಿದ್ದಾರೆ ಎಂದು ಅವರು ವಿವರಿಸಿದರು.
ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಎಲ್.ವಿ.ಶಿವರಾಜು, ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯನ್ನು ಪದ್ಮಿನಿ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ಮದನಹಳ್ಳಿಯ ಎಂ.ಎನ್.ರವಿಶಂಕರ್ ಅವರಿಗೆ ಪ್ರದಾನ ಮಾಡಲಾಯಿತು. ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್, ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್.ವಿ. ಸುರೇಶ, ಕುಲಸಚಿವ ಡಾ. ಕೆ.ಸಿ. ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಬಾರಿ ಹೆಚ್ಚಿನ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶವು ಹಾನಿಯಾಗಿದ್ದು, ರೈತರು ತುಂಬಾ ಸಂಕಷ್ಟ ಅನುಭವಿಸಿದರು. ಅದರಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳು ಮಳೆಹಾನಿಗೆ ಒಳಗಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಪರಶೀಲಿಸಿದೆ. ಮಳೆ ಹಾನಿಗೆ ಒಳಗಾದ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಎನ್‍ಡಿಆರ್‌ಎಫ್‍ನಿಂದ 8,500 ರೂ. ಹಾಗೂ ರಾಜ್ಯ ಸರಕಾರದಿಂದ 8,500 ರೂ.ನಂತೆ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.
-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ







