ನೀಟ್, ಎನ್ಟಿಎ ರದ್ದತಿಗೆ ನಿರ್ಣಯ ಕೈಗೊಳ್ಳುವಂತೆ ಸಿಎಂಗೆ ನಾಗರಿಕ ಸಮಾಜ ಪತ್ರ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ನೀಟ್ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ರದ್ದತಿಗೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಆ.13ರಿಂದ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸುವಂತೆ ನಾಗರಿಕ ಸಮಾಜ ಒತ್ತಾಯಿಸಿದೆ.
ಬುಧವಾರ ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ನಿರಂಜನಾರಾಧ್ಯ ವಿ.ಪಿ., ರಾಜಾರಾಂ ತಲ್ಲೂರು, ಇಂದೂಧರ ಹೊನ್ನಾಪುರ, ಡಾ.ಸಬಿಹಾಭೂಮಿಗೌಡ, ಮೂಡ್ನಾಕೂಡ ಚಿನ್ನಸ್ವಾಮಿ, ಡಾ.ವಸುಂಧರ ಭೂಪತಿ, ಸನತ್ಕುಮಾರ ಬೆಳಗಲಿ, ಡಾ.ಬಂಜಗೆರೆ ಜಯಪ್ರಕಾಶ್, ರಹ್ಮತ್ ತರೀಕೆರೆ ಸೇರಿ ಇತರರು ಪತ್ರ ಬರೆದಿದ್ದಾರೆ.
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ದೇಶದಾದ್ಯಂತ ಕಡ್ಡಾಯಗೊಳಿಸಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ನೀಟ್, ಸಂವಿಧಾನದ ಒಕ್ಕೂಟ ತತ್ವ, ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದುದರಿಂದ ನೀಟ್ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರದ್ದುಪಡಿಸಿ, ವೈದ್ಯಕೀಯ ಪ್ರವೇಶದ ನೀತಿ ಮತ್ತು ಪ್ರಕ್ರಿಯೆಯನ್ನು ರಾಜ್ಯಗಳಿಗೆ ಮರಳಿ ಒಪ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅವ್ಯವಸ್ಥೆಗಳಿಂದ ವಿಶ್ವಾಸಾರ್ಹತೆ ಕಳೆದುಕೊಂಡಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರದ್ದುಪಡಿಸಿ, ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸಲು ಒತ್ತಾಯಿಸಬೇಕು ಎಂದಿದ್ದಾರೆ.
ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ದ್ವಿತೀಯ ಪಿಯುಸಿ ಅಂಕಗಳು, ಸಂವಿಧಾನಬದ್ಧ ಮೀಸಲಾತಿಯ ಆಧಾರದ ಮೇಲೆ ಪ್ರವೇಶ ನೀಡುವ ರಾಜ್ಯ ನೀತಿಯನ್ನು ಪ್ರಕಟಿಸಬೇಕು. ತಮಿಳುನಾಡು ಮಾದರಿಯಲ್ಲಿ ಪ್ರತ್ಯೇಕ ಮಸೂದೆಯನ್ನು ರೂಪಿಸಿ, ರಾಷ್ಟ್ರಪತಿ ಅಂಕಿತಕ್ಕಾಗಿ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು, ವೈದ್ಯಕೀಯ ಶಿಕ್ಷಣ ಪರಿಣತರು, ಸಾಮಾಜಿಕ ನ್ಯಾಯ ಚಳವಳಿಗಳು ಮತ್ತು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ನೀಟ್ ವಿರುದ್ಧ ನಿಲುವು ಹೊಂದಿರುವ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ, ರಾಜ್ಯಗಳ ಶೈಕ್ಷಣಿಕ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ರಾಷ್ಟ್ರಮಟ್ಟದ ಪ್ರಯತ್ನವನ್ನು ಮುನ್ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕವು ಸಾಮಾಜಿಕ ನ್ಯಾಯ, ಸಾರ್ವಜನಿಕ ಶಿಕ್ಷಣ ಮತ್ತು ಒಕ್ಕೂಟ ವ್ಯವಸ್ಥೆಯ ಪರಂಪರೆಯನ್ನು ಹೊಂದಿರುವ ರಾಜ್ಯವಾಗಿದೆ. ವೈದ್ಯರಾಗುವ ಅವಕಾಶವು ಕುಟುಂಬದ ಆರ್ಥಿಕ ಸಾಮಥ್ರ್ಯ, ದುಬಾರಿ ತರಬೇತಿ ಅಥವಾ ಒಂದೇ ದಿನದ ಕೇಂದ್ರೀಕೃತ ಪರೀಕ್ಷೆಯ ಮೇಲೆ ಅವಲಂಬಿತವಾಗದೆ, ವಿದ್ಯಾರ್ಥಿಯ ಶಾಲಾ ಸಾಧನೆ, ಪರಿಶ್ರಮ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಮೇಲೆ ನಿರ್ಧಾರವಾಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ಸರಕಾರ ತಕ್ಷಣ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.






