Nelamangala | ರಸ್ತೆ ಅಪಘಾತ : ಒಂದೇ ಕುಟುಂಬದ ಇಬ್ಬರು ಮೃತ್ಯು, ನಾಲ್ವರು ಗಂಭೀರ

ಬೆಂಗಳೂರು : ಕ್ರಿಸ್ಮಸ್ ಹಬ್ಬದ ರಜೆಗೆಂದು ಹುಟ್ಟೂರಿಗೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಕಾರೊಂದು ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಕ್ರಾಸ್‍ನಲ್ಲಿ ಗುರುವಾರ(ಡಿ.25) ವರದಿಯಾಗಿದೆ.
ಗೌರಿಬಿದನೂರು ಮೂಲದ ವೀರಭದ್ರ(88) ಮತ್ತು ಹರೀಶ್(39) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ಗೌರಮ್ಮ(62), ಮೈತ್ರಿ(32), ಸಿರಿ(10), ವಂದನಾ(8) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಡಿ.25ರ ಗುರುವಾರಂದು ಕ್ರಿಸ್ಮಸ್ ಹಬ್ಬದ ರಜೆಯ ಹಿನ್ನೆಲೆ ವೀರಭದ್ರ ಅವರ ಕುಟುಂಬವು ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ತಮ್ಮ ನಿವಾಸದಿಂದ ಹುಟ್ಟೂರು ಗೌರಿಬಿದನೂರಿಗೆಂದು ಕಾರಿನಲ್ಲಿ ತೆರಳಿತ್ತು. ಅಲ್ಲಿ ತೋಟ, ಜಮೀನು ನೋಡಿಕೊಂಡು, ಕುಟುಂಬದವರೊಂದಿಗೆ ಕೆಲಕಾಲ ಸಮಯ ಕಳೆದು ಪುನಃ ಅದೇ ದಿನ ಸಂಜೆ ವಾಪಸ್ಸಾಗುವ ಸಂದರ್ಭದಲ್ಲಿ ನೆಲಮಂಗಲ ತಾಲೂಕಿನ ತೋಟಗೆರೆ ಕ್ರಾಸ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‍ಗೆ ಢಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಉಳಿದ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







