‘ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣದ ಕೇಸರೀಕರಣಕ್ಕಾಗಿ ರೂಪಿಸಲಾಗಿದೆ: ಪ್ರೊ.ನಿರಂಜನಾರಾಧ್ಯ
ಅಖಿಲ ಭಾರತ ವಿದ್ಯಾರ್ಥಿ ಸಂಘದ ಜಿಲ್ಲಾ ಸಮಾವೇಶ

ಪ್ರೊ.ನಿರಂಜನಾರಾಧ್ಯ
ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್ಇಪಿ) ಶಿಕ್ಷಣದ ಕೇಸರೀಕರಣಕ್ಕಾಗಿ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ, ಹಿಜಾಬ್ ನಿಷೇಧ, ಇತ್ಯಾದಿಗಳನ್ನು ಕರ್ನಾಟಕದಲ್ಲಿ ಮಾಡಲಾಗಿದೆ ಎಂದು ಶಿಕ್ಷಣ ತಜ್ಞರು ಪ್ರೊ.ನಿರಂಜನಾರಾಧ್ಯ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘವು ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸವನ್ನು ತಮ್ಮ ಇಚ್ಛೆಗೆ ತಕ್ಕಂತೆ ಸೃಷ್ಟಿಸಿ ತಮ್ಮ ಪ್ರಕಾರ ಇರುವ ‘ವೈದಿಕ ಮೌಲ್ಯ’ಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುತ್ತಿದ್ದಾರೆ. ಈ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಸಂವಿಧಾನವನ್ನು ಅನುಸರಿಸದೆ ಶಿಕ್ಷಣದ ಕೇಂದ್ರೀಕರಣ, ಕಾರ್ಪೊರೇಟೀಕರಣ, ಕೋಮುವಾದೀಕರಣ, ಖಾಸಗೀಕರಣ ಮತ್ತು ಕೇಸರೀಕರಣವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸಬೀಹಾ ಭೂಮಿಗೌಡ ಮಾತನಾಡಿ, ವಿದ್ಯಾರ್ಥಿ ಸಂಘಟನೆಗಳು ಸಾಂಸ್ಕøತಿಕ ಕಾರ್ಯಕ್ರಮ ಅಥವಾ ಸಂವಾದಗಳನ್ನು ಆಯೋಜಿಸುವಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ. ಪ್ರಸ್ತು ಸನ್ನಿವೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಮುಂದಾಗಬೇಕು ಎಂದು ಹೇಳಿದರು.
ಭೌತಶಾಸ್ತ್ರಜ್ಞೆ ಮತ್ತು ನಾಗರೀಕ ಹಕ್ಕುಗಳ ಕಾರ್ಯಕರ್ತೆ ಪ್ರಜ್ವಲ್ ಶಾಸ್ತ್ರಿ ಮಾತನಾಡಿ, ಐಐಎಸ್ಸಿ ಅಲ್ಲಿ ಚರ್ಚೆ ಒಂದನ್ನು ಆಡಳಿತದವರು ತಡೆದಿದ್ದು, ಈ ಕುರಿತು ಬಹಿರಂಗ ಪಾತ್ರಕ್ಕೆ ಸಹಿಹಾಕಿದ ಐಸರ್ ಮೊಹಾಲಿಯ ಇಬ್ಬರು ಪ್ರೊಫೆಸರ್ ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.
ವಿಶ್ವವಿದ್ಯಾಲಯಗಳಲ್ಲಿ ತುಳಿತಕ್ಕೊಳಪಟ್ಟ ಸಮುದಾಯದಿಂದ ಬರುವ ವಿದ್ಯಾರ್ಥಿಗಳು ಅನುಭವಿಸುವ ತಾರತಮ್ಯ ಮತ್ತು ದೌರ್ಜನ್ಯವೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು.
ಸಂಘಟನೆಯ ವರದಿಯನ್ನು ಸಮ್ಮೇಳನದಲ್ಲಿ ಮಂಡಿಸಲಾಯಿತು. ವಿದ್ಯಾರ್ಥಿ ಚಳುವಳಿ, ಲಿಂಗ ನ್ಯಾಯ, ಜಾತಿ ವಿನಾಶಕ್ಕಾಗಿ, ಮತ್ತು ಮಾನಸಿಕ ಆರೋಗ್ಯದ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಯಿತು. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ವಿದ್ಯಾರ್ಥಿ ಸಂಘಟನೆಯನ್ನು ಬಲಪಡಿಸಲು ನಿರ್ಣಯ ಮಾಡಲಾಯಿತು.







