ಬೆಂಗಳೂರು ಸಂಚಾರ ಸುಧಾರಣೆಗೆ ಹೊಸ ಕ್ರಮ; ಐದು ಫ್ಲೈಓವರ್‌ಗಳಲ್ಲಿ ಹಂತ ಹಂತವಾಗಿ ನಿರ್ಬಂಧ ಜಾರಿ : ಸಚಿವ ಪ್ರಿಯಾಂಕ್ ಖರ್ಗೆ
"ದ್ವಿಚಕ್ರ ವಾಹನಗಳಿಗೆ ಅವಕಾಶ, ಸರಕು ವಾಹನಗಳ ನಿರ್ಬಂಧ ಮುಂದುವರಿಕೆ"

ಬೆಂಗಳೂರು : ನಗರದ ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ವಾಹನ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಐದು ಪ್ರಮುಖ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ವಿವಿಧ ವರ್ಗದ ವಾಹನಗಳ ಸಂಚಾರಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈಗಾಗಲೇ ನಾಲ್ಕು ಪ್ರಮುಖ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಿದ ಬಳಿಕ ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಬಿಜಿಎಸ್ ಫ್ಲೈಓವರ್, ಪೀಣ್ಯ ಫ್ಲೈಓವರ್ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ಸಂಚಾರ ಸುಗಮವಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ) ಪ್ರವೇಶ ಮಾರ್ಗಗಳಲ್ಲೇ ಸರಕು ವಾಹನ, ದ್ವಿಚಕ್ರ ವಾಹನ ಮತ್ತು ಆಟೋರಿಕ್ಷಾಗಳನ್ನು ಕೆಳರಸ್ತೆಗೆ ತಿರುಗಿಸುವುದರಿಂದ ದಟ್ಟಣೆ ಹಾಗೂ ಸಂಚಾರ ಸಂಘರ್ಷ ಉಂಟಾಗುತ್ತಿದೆ ಎಂದು ಪರಿಶೀಲನೆಯಲ್ಲಿ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಮೊದಲ ಹಂತದಲ್ಲಿ ಈಗಾಗಲೇ ಅಧಿಸೂಚನೆಗೊಂಡಿರುವ ಸಮಯದಲ್ಲಿ ಸರಕು ಸಾಗಣೆ ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ ಪ್ರಸ್ತುತ ಹಂತದಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳಿಗೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.
ದ್ವಿಚಕ್ರ ವಾಹನ ಸವಾರರು ಎಡ ಲೇನ್ ಬಳಸಬೇಕು, ಲೇನ್ ಶಿಸ್ತನ್ನು ಪಾಲಿಸಬೇಕು, ಅಪಾಯಕಾರಿ ಓವರ್‌ಟೇಕಿಂಗ್ ತಪ್ಪಿಸಬೇಕು ಹಾಗೂ ಗಂಟೆಗೆ 60 ಕಿ.ಮೀ. ವೇಗ ಮೀರಬಾರದು ಎಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಇದೇ ಮಾದರಿಯ ಹಂತ ಹಂತದ ವ್ಯವಸ್ಥೆಯನ್ನು ಸೆಪ್ಟೆಂಬರ್ 11ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲೂ ಜಾರಿಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಸರಕು ವಾಹನಗಳ ಮೇಲಿನ ನಿರ್ಬಂಧ ಜಾರಿಯಾಗಲಿದ್ದು, ದ್ವಿಚಕ್ರ ವಾಹನಗಳಿಗೆ ಸದ್ಯ ಸಂಚಾರಕ್ಕೆ ಅವಕಾಶ ಮುಂದುವರಿಯಲಿದೆ.
ಸಂಚಾರ ನಿರ್ಬಂಧಗಳ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸಿ, ರಸ್ತೆ ಸುರಕ್ಷತೆ, ಸಂಚಾರದ ಹರಿವು ಹಾಗೂ ಕೆಳಮಟ್ಟದ ರಸ್ತೆಗಳ ಮೇಲಿನ ಪರಿಣಾಮವನ್ನು ಗಮನಿಸಿ ಉಳಿದ ನಿರ್ಬಂಧಗಳನ್ನೂ ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
“ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲವಾಗುವ ರೀತಿಯಲ್ಲಿ ಸ್ಥಳೀಯ ಸಂಚಾರ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮಗಳನ್ನು ಜಾರಿಗೊಳಿಸುವುದು ಸರ್ಕಾರದ ಉದ್ದೇಶ. ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರ ಎರಡಕ್ಕೂ ಸಮಾನ ಆದ್ಯತೆ ನೀಡಲಾಗುತ್ತದೆ,” ಎಂದು ಸಚಿವರು ಹೇಳಿದ್ದಾರೆ.






