ವಿದ್ಯಾರ್ಥಿ ಸಂಘಟನೆಗಳಿಗೆ ಆಹ್ವಾನ ನೀಡದೇ ನೂತನ ಎಸ್ಇಪಿ ಸಭೆ : ಆರೋಪ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಎನ್ಇಪಿ ರದ್ದು ಮಾಡಿ, ಎಸ್ಇಪಿ (ರಾಜ್ಯ ಶಿಕ್ಷಣ ನೀತಿ) ತರಲು ಸರಕಾರ ರಚಿಸಿರುವ ಸಮಿತಿಯು ಆಯ್ದ ಶಿಕ್ಷಣ ತಜ್ಞರ ಜೊತೆಗೆ ಜ.10 ರಂದು ಉನ್ನತ ಶಿಕ್ಷಣ ಮಂಡಳಿಯ ಸಭಾಂಗಣದಲ್ಲಿ ಸಭೆಯೊಂದನ್ನು ಕರೆದಿದೆ. ಸಭೆಗೆ ಆಹ್ವಾನಿತರಲ್ಲಿ ವಿದ್ಯಾರ್ಥಿ ಸಂಘಟನೆಗಳ ಯಾವುದೇ ಪ್ರತಿನಿಧಿಗಳಿಗೆ ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಸದಸ್ಯರು ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ SIOನ ಝೀಶಾನ್ ಆಖಿಲ್ ಸಿದ್ದಿಕ್, DVPಯ ಅಜಿತ್ ಬೆಳ್ಳಿಬಟ್ಲು, AISAನ ಆರತ್ರಿಕ, KVS ನ ಸರೋವರ ಬೆಂಕಿಕೆರೆ, AISFನ ವೀಣಾ, AIFRTEನ ಶಶಾಂಕ್ ಎಸ್ ಆರ್ ಅವರು, ಶಿಕ್ಷಣದ ವಿಚಾರದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಮತ್ತು ಶಿಕ್ಷಕರ ಸಂಘಟನೆಗಳೊಂದಿಗೆ ಸಮಿತಿಯು ಯಾವುದೇ ಸಮಾಲೋಚನೆ ನಡೆಸಿಲ್ಲ. ಸಮಿತಿಯು ಇತ್ತೀಚಿಗೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿರುವಂತೆ, ಈ ಸಮಿತಿಯು ನವೆಂಬರ್ 2023 ರಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ಹಲವಾರು ಜನರೊಂದಿಗೆ ಸಮಾಲೋಚನಾ ಸಭೆಗಳನ್ನೂ ನಡೆಸುತ್ತಿದೆ ಎಂದಿದ್ದಾರೆ.
ಧನಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷರಾದ ಪ್ರೊ. ಸುಖದೇವ್ ಥೋರಟ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ 15 ಜನ ಸದಸ್ಯರು ಹಾಗೂ 8 ಜನ ವಿಷಯ ತಜ್ಞರಿದ್ದಾರೆ. ನಮ್ಮ ರಾಜ್ಯದ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಬೇಕೆಂಬುದು ವಿದ್ಯಾರ್ಥಿ ಸಂಘಟನೆಗಳ ಹಾಗೂ ಕನ್ನಡಿಗರ ಒಕ್ಕೊರಲ ಧ್ವನಿಯಾಗಿತ್ತು. ಆದರೆ, ಕರ್ನಾಟಕ ರಾಜ್ಯ ಶಿಕ್ಷಣ ನೀತಿ ರೂಪಿಸುವಲ್ಲಿ ಕರ್ನಾಟಕದವರಿಗಿಂತ ದಿಲ್ಲಿವಾಲಾಗಳೇ ಹೆಚ್ಚಿದ್ದಾರೆ. ಕರ್ನಾಟಕದ ಹಿತಾಸಕ್ತಿಯನ್ನು ಖಾತರಿಪಡುವಲ್ಲಿ ಈ ಪ್ರಕ್ರಿಯೆ ಸರಿಯೇ ಎಂದು ಸಂಘಟನೆಗಳು ಪ್ರಶ್ನಿಸಿವೆ.
“ಬಿಜೆಪಿಯ ಏಕಸ್ವಾಮ್ಯ ಧೋರಣೆಯನ್ನು ತಿರಸ್ಕರಿಸಿದ ರಾಜ್ಯದ ಜನತೆ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ಮೌಲ್ಯಗಳನ್ನು ಮುಂದಿಟ್ಟುಕೊಂಡು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಕನ್ನಡಿಗರ ಹಿತಾಸಕ್ತಿಯನ್ನು ಪರಿಗಣಿಸದ ಯಾವುದೇ ಸರ್ಕಾರವನ್ನು ಕನ್ನಡಿಗರು ಯಾವತ್ತಿಗೂ ಕೂಡ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಹಿತಾಸಕ್ತಿಯನ್ನು ಪರಿಗಣಿಸಲೇಬೇಕು” ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿ-ಯುವಜನತೆಯನ್ನು ಒಳಗೊಂಡು ರಾಜ್ಯ ಶಿಕ್ಷಣ ನೀತಿಯ ಕರಡನ್ನು ವಿಸ್ತೃತವಾದ ಚರ್ಚೆಗಳಿಂದ ರೂಪಿಸಿಬೇಕು. ಬಳಿಕ ಕರಡನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿ ನೀತಿಯನ್ನು ಅಂತಿಮಗೊಳಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.







