ನೇಕಾರರ ಆರ್ಥಿಕ ಸುಸ್ಥಿರತೆಗೆ ಹೊಸ ಜವಳಿ ನೀತಿ : ಶಾಲಿನಿ ರಜನೀಶ್

ಶಾಲಿನಿ ರಜನೀಶ್
ಬೆಂಗಳೂರು : ಕರ್ನಾಟಕವು ಅತ್ಯಂತ ಶ್ರೀಮಂತ ನೇಕಾರಿಕೆ ಹಾಗೂ ಜವಳಿ ಪರಂಪರೆ ಹೊಂದಿದ್ದು, ಶತಮಾನಗಳಿಂದಲೂ ಯುರೋಪ್ ಮತ್ತು ಅರಬ್ ದೇಶಗಳಿಗೆ ನಮ್ಮ ಜವಳಿ ರಫ್ತಾಗುತ್ತಿದೆ. ನೇಕಾರರ ಬದುಕನ್ನು ಸುಸ್ಥಿರಗೊಳಿಸಲು ಹಾಗೂ ಈ ರಂಗಕ್ಕೆ ಆರ್ಥಿಕ ಚೈತನ್ಯ ನೀಡಲು ಹೊಸ ಜವಳಿ ನೀತಿಯು ಕಲ್ಯಾಣ ಆಧಾರಿತ ಮಾದರಿಯಿಂದ ವಾಣಿಜ್ಯಿಕವಾಗಿ ಸುಸ್ಥಿರವಾದ, ನೇಕಾರ ಕೇಂದ್ರಿತ ಆರ್ಥಿಕ ಮಾದರಿಗೆ ಬದಲಾವಣೆ ತಂದಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಬಾಲ್ಡೋಟ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ನೇಕಾರಿಕೆ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಜವಳಿ ವೈವಿಧ್ಯತೆಯನ್ನು ಕೊಂಡಾಡಿದರು ಹಾಗೂ ಜವಳಿ ಕ್ಷೇತ್ರದ ಉತ್ತೇಜನಕ್ಕೆ ಪ್ರಮುಖ ಅಂಶಗಳನ್ನು ಹಂಚಿಕೊಂಡರು.
ನೇಕಾರಿಕಾ ಪರಂಪರೆ :
ಕನ್ನಡ ರಾಜ್ಯೋತ್ಸವದ(ಕರ್ನಾಟಕ ಏಕೀಕರಣ ದಿನ)ಸಂದರ್ಭವನ್ನು ಸ್ಮರಿಸಿದ ಅವರು, ಕದಂಬರು, ರಾಷ್ಟ್ರಕೂಟರು ಮತ್ತು ಚಾಲುಕ್ಯರ ಆಳ್ವಿಕೆಯ ಕಾಲದಲ್ಲೂ ಕರ್ನಾಟಕದ ಜವಳಿ ವ್ಯಾಪಾರವು ಪ್ರಮುಖ ಪಾತ್ರ ವಹಿಸಿತ್ತು. 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದಲೂ ಬೆಳೆದು ಬಂದ ಉತ್ತರ ಕರ್ನಾಟಕದ ಇಳಕಲ್ ಸೀರೆಗಳು ಕೇವಲ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಹಾಗೂ ಗೋವಾಗಳಲ್ಲೂ ಜನಪ್ರಿಯವಾಗಿವೆ ಎಂದರು.
ಮೈಸೂರು ಸಿಲ್ಕ್, ಮೊಳಕಾಲ್ಮೂರು ಸಿಲ್ಕ್, ಉಡುಪಿ ಸೀರೆಗಳು, ದಕ್ಷಿಣ-ಮಧ್ಯ ಕರ್ನಾಟಕದ ಚರಕ ಸೀರೆಗಳು, ಬೆಂಗಳೂರು ಸಿಲ್ಕ್, ಯಾದಗಿರಿಯ ಫರ್ನಿಷಿಂಗ್ ಬಟ್ಟೆಗಳು, ಸಂಡೂರಿನ ಲಂಬಾಣಿ ಉಡುಪುಗಳು ಹಾಗೂ ಧಾರವಾಡದ ಕಸೂತಿ ಕಲೆಯು ರಾಜ್ಯದ ಜವಳಿ ವೈವಿಧ್ಯತೆಗೆ ಜೀವಂತ ಸಾಕ್ಷಿಗಳಾಗಿವೆ. ಇತ್ತೀಚೆಗೆ ಪುನಶ್ಚೇತನಗೊಂಡ ಆನೇಕಲ್ ತಾಲೂಕಿನ ‘ಆನೇಕಲ್ ಸೀರೆ' ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದು ಅವರು ಹೇಳಿದರು.
ಬೆಂಬಲ ನೀಡಲು ಮನವಿ :
ನಾವು ಕರ್ನಾಟಕದ ಸೀರೆ ಮತ್ತು ನೇಯ್ಗೆಯ ರಾಯಭಾರಿಗಳಾಗಬೇಕು. ಪ್ರತಿಯೊಬ್ಬರೂ ಹೆಚ್ಚು-ಹೆಚ್ಚು ಕರ್ನಾಟಕದ ಸೀರೆಗಳನ್ನು ಉಡುವ ಮೂಲಕ ನಮ್ಮ ನೇಕಾರಿಕಾ ವ್ಯವಸ್ಥೆಗೆ ಆರ್ಥಿಕ ಸುಸ್ಥಿರತೆ ತರಲು ಸಹಕರಿಸಬೇಕು ಎಂದು ಶಾಲಿನಿ ರಜನೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನೇಕಾರರ ಹಿತರಕ್ಷಣೆ ಹಾಗೂ ಸಾಂಪ್ರದಾಯಿಕ ಕಲೆಯ ಉಳಿವಿಗಾಗಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಸಹಯೋಗದ ಕುರಿತು ಅವರು ಬೆಳಕು ಚೆಲ್ಲಿದ ಅವರು, ಕರ್ನಾಟಕದ ಪಾರಂಪರಿಕ ನೇಕಾರಿಕಾ ಕ್ಲಸ್ಟರ್ ಗಳನ್ನು ಒಳಗೊಂಡ ಸಮಗ್ರ ಪುನಶ್ಚೇತನ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಕರ್ನಾಟಕವನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.
ಆಧುನಿಕ ಅನುಕರಣೆ ಬಟ್ಟೆಗಳು ಹಾಗೂ ಗ್ರಾಹಕರ ಬದಲಾದ ಆಯ್ಕೆಗಳಿಂದ ನಶಿಸುತ್ತಿರುವ ಸಾಂಪ್ರದಾಯಿಕ ನೇಕಾರಿಕೆಯನ್ನು ಉಳಿಸಲು ವಿಶೇಷ ನಿಧಿ ಸ್ಥಾಪಿಸಬೇಕು. ಪ್ರಮುಖ ಕೈಮಗ್ಗ ಪ್ರದೇಶಗಳಲ್ಲಿ ಕಲಾತ್ಮಕ ವಿನ್ಯಾಸ ಹಾಗೂ ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರಕಾರವು ರಾಜ್ಯಗಳಿಗೆ ಬೆಂಬಲ ನೀಡಬೇಕು ಎಂದರು.
ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳನ್ನು ಆಧುನಿಕ ಜೀವನಶೈಲಿ ಹಾಗೂ ಫ್ಯಾಷನ್ ವಿಭಾಗಕ್ಕೆ ತಕ್ಕಂತೆ ತಲುಪಿಸಲು ಸೂಕ್ತ ಮಾರುಕಟ್ಟೆ ತಂತ್ರಜ್ಞಾನ ರೂಪಿಸಬೇಕು. ರಾಜ್ಯ ಸರಕಾರದ ಕೈಮಗ್ಗ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ಮನವಿ ಮಾಡಿದರು.
2018ರ ಜನಗಣತಿಯ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಸುಮಾರು 55ಸಾವಿರ ಕೈಮಗ್ಗ ಹಾಗೂ 1.25 ಲಕ್ಷ ವಿದ್ಯುತ್ ಮಗ್ಗ ನೇಕಾರರಿದ್ದಾರೆ. ಸಾಂಪ್ರದಾಯಿಕ ನೇಕಾರಿಕೆಯನ್ನು ರಕ್ಷಿಸಲು ಹಾಗೂ ಬೆಂಬಲಿಸಲು ಬಾಲ್ಡೋಟ ಫೌಂಡೇಶನ್ ನೀಡುತ್ತಿರುವ ಕೊಡುಗೆಯನ್ನು ಶ್ಲಾಘನೀಯ. ಸರಕಾರ, ಕಾರ್ಪೋರೇಟ್ ವಲಯ, ಫೌಂಡೇಶನ್ಗಳು ಹಾಗೂ ನೇಕಾರ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನೇಕಾರಿಕಾ ರಂಗವನ್ನು ಬಲಪಡಿಸಲು ಸಾಧ್ಯ ಎಂದು ಅವರು ತಿಳಿಸಿದರು.






