ವೈಟ್ಫೀಲ್ಡ್ ನಲ್ಲಿ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ಸ್ಥಾಪಿಸಲು ಎಂ.ಬಿ.ಪಾಟೀಲ್ ಆಹ್ವಾನ
ಫೆಬ್ರವರಿಯಲ್ಲಿ ರಾಜ್ಯಕ್ಕೆ ಭೇಟಿ ನೀಡಲಿರುವ ಅಮೆರಿಕದ ವಾಣಿಜ್ಯ ನಿಯೋಗ
ಬೆಂಗಳೂರು: ‘ಬೆಂಗಳೂರು ನಗರದ ವೈಟ್ಫೀಲ್ಡ್ ನಲ್ಲಿ ಗುರುತಿಸಿರುವ ಪ್ರದೇಶದಲ್ಲಿ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ಸ್ಥಾಪಿಸುವುದನ್ನು ಪರಿಗಣಿಸಬೇಕು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಪಾಟೀಲ್, ಅಮೆರಿಕದ ಕಾನ್ಸುಲೇಟ್ ಜನರಲ್ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಭಾರತದಲ್ಲಿನ ಅಮೆರಿಕದ ಕಾನ್ಸುಲೇಟ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯು. ಹೋಡ್ಜಸ್ ಅವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಬೆಂಗಳೂರಿನ ಹೊರವಲಯದಲ್ಲಿ ಉದ್ದೇಶಿತ ಜ್ಞಾನ, ಆರೋಗ್ಯ ರಕ್ಷಣೆ, ನಾವೀನ್ಯತೆ ಮತ್ತು ಸಂಶೋಧನೆ (ಕೆಎಚ್ಐಆರ್ ಸಿಟಿ) ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೋಡ್ಜಸ್ ಅವರಿಗೆ ಸಭೆಯಲ್ಲಿ ಮಾಹಿತಿ ನೀಡಿದರು.
‘ಇದು ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡಲಿದೆ. 2ಸಾವಿರ ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ‘ಕೆಎಚ್ಐಆರ್ ಸಿಟಿ’ಗೆ ಸಂಬಂಧಿಸಿದ ಅಂತಿಮ ಯೋಜನೆಯು ಮುಂದಿನ 2ರಿಂದ 3 ತಿಂಗಳಲ್ಲಿ ಸಿದ್ಧಗೊಳ್ಳಲಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಮಷಿನ್ಟೂಲ್ಸ್ ಮತ್ತಿತರ ವಲಯಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳಿವೆ. ಕರ್ನಾಟಕವು ಈಗಾಗಲೇ ಐಟಿ ಮತ್ತು ಡಿಸೈನ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದೆ. ಸರಕುಗಳ ತಯಾರಿಕಾ ವಲಯದಲ್ಲಿಯೂ ರಾಜ್ಯವನ್ನು ಇದೇ ಬಗೆಯಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶ್ರಮಿಸುತ್ತಿದೆ. 2ಮತ್ತು 3ನೆ ಹಂತದ ನಗರಗಳಲ್ಲಿ ಹೊಸ ಉದ್ಯಮಗಳ ಸ್ಥಾಪನೆಗೆ ನೆರವಾಗುವ ಅತ್ಯುತ್ತಮ ಸಂಪರ್ಕ ಸೌಲಭ್ಯಗಳು ಇವೆ’ ಎಂದೂ ಅವರು ವಿವರಿಸಿದರು.
‘ಕರ್ನಾಟಕದ 2 ಮತ್ತು 3ನೆ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಅಮೆರಿಕದ ಕಂಪೆನಿಗಳು ಆಸಕ್ತಿ ಹೊಂದಿವೆ’ ಎಂದು ಕ್ರಿಸ್ಟೋಫರ್ ಡಬ್ಲ್ಯು. ಹೋಡ್ಜಸ್ ಹೇಳಿದರು. ಸಚಿವರ ಜೊತೆಗಿನ ಸಭೆಯಲ್ಲಿ ಅಮೆರಿಕದ ಕಂಪೆನಿಗಳ ಪರವಾಗಿ ಅವರು ಈ ಇಂಗಿತ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಮೈಸೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ ಅಮೆರಿಕದ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಇಂತಹ ನಗರಗಳಲ್ಲಿ ಇರುವ ಮೂಲಸೌಲಭ್ಯಗಳ ಲಭ್ಯತೆ ಕುರಿತು ಹೋಡ್ಜಸ್ ಚರ್ಚಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು.