‘ಬರ ಪರಿಹಾರ’ ಬಿಡುಗಡೆಗೆ ರಾಜಭವನದ ಕದ ತಟ್ಟಿದ ಬಿಜೆಪಿ
Photo: X@RAshokaBJP
ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸರಕಾರ ಲಘುವಾಗಿ ಪರಿಗಣಿಸಿದೆ, ಈ ಕೂಡಲೇ ಬರ ಪರಿಹಾರದ ಹಣವನ್ನು ರೈತರಿಗೆ ಬಿಡುಗಡೆ ಮಾಡಿ ರೈತ ಸಮೂಹವನ್ನು ಉಳಿಸಬೇಕು ಎಂದು ಕೋರಿ ಬಿಜೆಪಿ ಪಕ್ಷದ ಮುಖಂಡರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ರಾಜಭವನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಬಿಜೆಪಿ ನಾಯಕರ ನಿಯೋಗ, ಬಿಜೆಪಿ ಪಕ್ಷ ನಡೆಸಿದ ರಾಜ್ಯದಲ್ಲಿನ ಬರ ಅಧ್ಯಯನದ ಕುರಿತ ವರದಿ ಸಲ್ಲಿಕೆ ಮಾಡಿದರು.
ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಬೇಜವಾಬ್ದಾರಿಯುತ ಸರಕಾರವಿದ್ದು, ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಅವರ ಕಡೆ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳು ಭೇಟಿ ಮಾಡಿಲ್ಲ, ಸಚಿವರು ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ಬರ ಬಂದು ಜನರೆಲ್ಲ ಗುಳೆ ಹೋಗುತ್ತಿದ್ದಾರೆ ಎಂದು ಹೇಳಿದರು.
ನಮ್ಮ ನೆರವಿಗೆ ಕೇಂದ್ರ ¸ ಸರಕಾರ ಬಂದಿಲ್ಲ ಎಂದು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ, ನಾನು ಕಂದಾಯ ಸಚಿವನಾಗಿದ್ದೆ.ಆಗಲೂ ಬರ ಬಂದಾಗ ಕೇಂದ್ರಕ್ಕೆ ಮನವಿ ಕೊಟ್ಟಿದ್ದೆವು. ಕೇಂದ್ರದ ಪರಿಹಾರಕ್ಕೆ ಕಾಯದೇ ನೇರ ನಗದು ವರ್ಗಾವಣೆ ಮೂಲಕ 3 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇವೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬರ ಪರಿಹಾರ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಒತ್ತಡ ಹೇರಿದಾಗ ಬಿಡುಗಡೆ ಮಾಡುತ್ತೇವೆ ಎಂದ್ದಿದ್ದರು. ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ಸರಕಾರಕ್ಕೆ ರೈತರ ಬಗ್ಗೆ ಚಿಂತೆ ಇಲ್ಲ ಎಂದು ಟೀಕಿಸಿದರು. ಈ ಸಂರ್ಭದಲ್ಲಿ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ, ಡಾ.ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ, ಮುನಿರಾಜು ಸೇರಿದಂತೆ ಪ್ರಮುಖರಿದ್ದರು.