ನ್ಯಾ ಡಾ. ಶಿವರಾಜ ವಿ. ಪಾಟೀಲರ ಆತ್ಮಕಥನ “ಕಳೆದ ಕಾಲ ನಡೆದ ದೂರ” ಕೃತಿ ಬಿಡುಗಡೆ
‘ಮಾನವೀಯ ವ್ಯಕ್ತಿ ಮಾತ್ರ ಅತ್ಯುತ್ತಮ ನ್ಯಾಯಮೂರ್ತಿ ಎನಿಸಿಕೊಳ್ಳಲು ಸಾಧ್ಯ: ನ್ಯಾ. ನಾರಿಮನ್

ಬೆಂಗಳೂರು: ಸಮಾಜದಲ್ಲಿ ಉತ್ತಮ ಮಾನವೀಯ ವ್ಯಕ್ತಿತ್ವ ಗುಣ ಹೊಂದಿದ್ದರೆ ಮಾತ್ರ ಅತ್ಯುತ್ತಮ ನ್ಯಾಯಮೂರ್ತಿ ಎನಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಚೌಡಯ್ಯ ಮೆಮೊರಿಯಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ್ ಅವರ ಆತ್ಮಕತನ ‘ಕಳೆದ ಕಾಲ ನಡೆದ ದೂರ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನ್ಯಾಯಮೂರ್ತಿ ಆದವರು ಸಂವಿಧಾನದ ಸತ್ ಸಂಪ್ರದಾಯಗಳನ್ನು ಎತ್ತಿ ಹಿಡಿಯಬೇಕು. ಮೌಲ್ಯಗಳನ್ನು ಕಾಪಾಡಬೇಕು ಎಂದು ನುಡಿದರು.
ನ್ಯಾಯಮೂರ್ತಿಗಳು ವಾದ–ಪ್ರತಿವಾದಗಳನ್ನು ಆಸಕ್ತಿಯಿಂದ ಆಲಿಸಬೇಕು. ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವೀನ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ಜತೆಗೆ, ನಮ್ಮ ಕೆಲಸಗಳೇ ನಮಗೆ ಕಾವಲು ನಾಯಿ ಆಗಬೇಕು. ಇದೇ ನಮ್ಮ ಯಶಸ್ಸಿನ ಮಾನದಂಡವಾಗಲಿದೆ. ಇಂತಹ ಸತ್ ಸಂಪ್ರದಾಯವನ್ನು ಜಸ್ಟೀಸ್ ಡಾ. ಶಿವರಾಜ ವಿ. ಪಾಟೀಲ ಹಾಕಿಕೊಟ್ಟಿದ್ದಾರೆ. ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾದರಿ ಎಂದು ಬಣ್ಣಿಸಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ಪೂರ್ವೀಕರು ಹಲವಾರು ಉತ್ತಮ ಸಂಪ್ರದಾಯಗಳನ್ನು ಹಾಕಿಕೊಟ್ಟಿದ್ದು, ಅದನ್ನು ಪರಿಪಾಲಿಸಬೇಕಿದೆ. ಇನ್ನೂ, ಕೇಶವಾನಂದ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಯನ್ನು ಬದಲಿಸಬಾರದು ಎಂದು ತೀರ್ಪು ನೀಡಿರುವುದು ಅತ್ಯಂತ ಪ್ರಮುಖವಾದದ್ದು, ಇಂತಹ ಹಲವಾರು ಚಾರಿತ್ರಿಕ ತೀರ್ಪುಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಚ್ಚಳಿಯದ ಪ್ರಭಾವ ಬೀರಿವೆ ಎಂದೂ ಅವರು ಉಲ್ಲೇಖಿಸಿದರು.
ತರಳಬಾಳು ಬೃಹನ್ಮಠದ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಮಾತನಾಡಿ, ಮನುಷ್ಯರಿಗೆ ಸಕಾರಾತ್ಮಕ ಚಿಂತನೆ, ಆಶಾದಾಯಕ ಧೋರಣೆ ಅತ್ಯಂತ ಅಗತ್ಯವಾಗಿದೆ. ನ್ಯಾ.ಶಿವರಾಜ್ ವಿ.ಪಾಟೀಲ್ ಅವರದ್ದು ಇಂತಹ ಉತ್ತಮ ಚಿಂತನೆ, ಆಲೋಚನೆಗಳನ್ನು ಹೊಂದಿರುವ ಕುಟುಂಬವಾಗಿದೆ. ಶಿವರಾಜ್ ಪಾಟೀಲ್ ಅವರ ಆತ್ಮಕಥನ ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ವಿಶ್ರಾಂತ ನ್ಯಾ.ಶಿವರಾಜ್ ವಿ.ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







