ಬೆಂಗಳೂರು: ಮೈಕಲ್ - ಫ್ಲಾವಿಯಾ ಡಿಸೋಜಾ ದಂಪತಿಗೆ ಸಿಬಿಸಿಐ ವತಿಯಿಂದ ಸನ್ಮಾನ

ಬೆಂಗಳೂರು: ಅನಿವಾಸಿ ಭಾರತೀಯ ಉದ್ಯಮಿ ಮತ್ತು ದಾನಿ ಮೈಕಲ್ ಡಿಸೋಜಾ ಮತ್ತು ಫ್ಲಾವಿಯಾ ಡಿಸೋಜಾ ಇವರನ್ನು ಬೆಂಗಳೂರಿನ ಸೈಂಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಒಫ್ ಹೆಲ್ತ್ ಸೈನ್ಸ್ ಸಭಾಂಗಣದಲ್ಲಿ, ಭಾರತೀಯ ಕಥೊಲಿಕ್ ಬಿಷಪ್ಸ್ ಕೊನ್ಫರೆನ್ಸ್ ಒಫ್ ಇಂಡಿಯಾ (ಸಿಬಿಸಿಐ) ವತಿಯಿಂದ ಭಾರತದ ಕಥೊಲಿಕ್ ಧರ್ಮ ಸಭೆ ಮತ್ತು ಧರ್ಮ ಸಭೆಯ ಸಂಸ್ಥೆಗಳಿಗೆ ಅವರು ನೀಡಿದ ಅಪಾರ ಕೊಡುಗೆಗಾಗಿ ಸನ್ಮಾನಿಸಲಾಯಿತು.
ಸಿಬಿಸಿಐ ಅಧ್ಯಕ್ಷ ಕಾರ್ಡಿನಲ್ ಪಿಲಿಫ್ ನೇರಿ ಫೆರಾವೊ ಅವರು ಮುಂಬೈ ಕಾರ್ಡಿನಲ್ ಓಸ್ವಲ್ಡ್ ಗ್ರೇಶಿಯಸ್, ಹೈದರಾಬಾದ್ ಕಾರ್ಡಿನಲ್ ಅಂತೋನಿ ಪೂಲಾ, ಮದ್ರಾಸ್ ಮಯ್ಲಾಪುರ್ ಮಹಾಧರ್ಮಾಧ್ಯಕ್ಷ ಜಾರ್ಜ್ ಅಂತೋಣಿ ಸ್ವಾಮಿ, ದೆಹಲಿಯ ಮಹಾಧರ್ಮಾಧ್ಯಕ್ಷ ಅಂತೋಣಿ ಕುಟೋ, ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೋ ಇವರ ಸಮ್ಮುಖದಲ್ಲಿ, ಡಿಸೋಜಾ ದಂಪತಿಗೆ ಶಾಲು - ಹಾರ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭ ಸ್ಥಳೀಯ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ| ಜೆರಾಲ್ದ್ ಐಸಾಕ್ ಲೋಬೊ, ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಜರಿದ್ದರು.
ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಮೈಕಲ್ ಡಿಸೋಜಾ, ತಮ್ಮ ತಂದೆಯಿಂದ ಪ್ರೇರೇಪಿತರಾಗಿ, ಪೂತ್ತೂರಿನಲ್ಲಿ ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯಿಂದ ಉದ್ಯಮ ಆರಂಭಿಸಿ, ಮಂಗಳೂರಿನಲ್ಲಿ ಸೋಜಾ ಇಲೆಕ್ಟ್ರೋನಿಕ್ಸ್ ಎಂಬ ಸಂಸ್ಥೆಗೆ ವಿಸ್ತರಿಸಿ, ಅಲ್ಲಿಂದ ದುಬೈಗೆ ಪ್ರಯಾಣ ಬೆಳೆಸಿ ಪ್ರಸ್ತುತ ಅಬುಧಾಬಿಯಲ್ಲಿ ಉದ್ಯಮಿಯಾಗಿದ್ದಾರೆ. ಎಚ್.ಎ.ಎಸ್ ಹಾಸ್ಪಿಟಾಲಿಟಿ ಎಂಬ ಉದ್ಯಮ ಸಂಸ್ಥೆ ಕಟ್ಟಿ ದುಬೈಯಾದ್ಯಂತ ಡ್ಯೂನ್ಸ್ ಮತ್ತು ಐವರಿ ಗ್ರಾಂಡ್ ಎಂಬ ಹೆಸರಿನ ಹೋಟೆಲ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಮಂಗಳೂರು ಧರ್ಮಕ್ಷೇತ್ರದಲ್ಲಿ ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ 25 ಕೋಟಿ ರೂ. ಎಡುಕೇರ್ ವಿದ್ಯಾನಿಧಿಯನ್ನು ಸ್ಥಾಪಿಸಲಾಗಿದ್ದು, 2013 ರಿಂದ ಈ ತನಕ ಸುಮಾರು 3,500 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಸಮಾಜದ ಅಶಕ್ತ ವರ್ಗದವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ 10 ಕೋಟಿ ರೂ. ನಿಧಿ ಸ್ಥಾಪಿಸಿ ಸ್ವ - ಸಹಾಯ ಗುಂಪುಗಳಿಗೆ ನೀಡಲಾಗಿದೆ. ಸುಮಾರು 10,000 ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ.
ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐಎಎಸ್, ಐಪಿಎಸ್ ಮತ್ತಿತರ ಸರಕಾರಿ ಅಧಿಕಾರಿಗಳಾಗಬೇಕೆಂಬ ಉದ್ದೇಶ ದಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಕೊಂಕಣಿ ಭಾಷೆ - ಸಾಹಿತ್ಯ - ಕಲೆಗಾಗಿ ಮಹತ್ವಾಕಾಂಕ್ಷಿ 'ವಿಶನ್ ಕೊಂಕಣಿ' ಕಾರ್ಯಕ್ರಮದ ಮೂಲಕ ಉತ್ತಮ ಗುಣಮಟ್ಟದ 100 ಕೊಂಕಣಿ ಪುಸ್ತಕಗಳನ್ನು ಪ್ರಕಟಿಸಲು ಪುಸ್ತಕ ಪ್ರಾಧಿಕಾರ ಸ್ಥಾಪಿಸಿ ರೂ. 40 ಲಕ್ಷ, ಕೊಂಕಣಿ ಸಿನೇಮಾ ನಿರ್ಮಾಣಕ್ಕೆ 25 ಲಕ್ಷ, 25 ಕೊಂಕಣಿ ಹಾಡುಗಳ ನಿರ್ಮಾಣಕ್ಕೆ 10 ಲಕ್ಷ ರೂ. ನಿಧಿಯನ್ನು ಮೀಸಲಿಟ್ಟಿದ್ದಾರೆ.
ದೇಶ ವಿದೇಶಗಳಲ್ಲಿ ನಡೆಯುವ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ನಾಟಕ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವುದಲ್ಲದೇ, 2023 ನವೆಂಬರ್ ನಲ್ಲಿ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಮ್ಮೇಳನದ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ.
ಪ್ರಸ್ತುತ ಕುಟುಂಬ ಸಮೇತ ಮೈಕಲ್ ಮತ್ತು ಫ್ಲಾವಿಯಾ ಡಿಸೋಜಾ ಅಬುಧಾಬಿಯಲ್ಲಿ ವಾಸವಾಗಿದ್ದಾರೆ.







