ಕಾರ್ಯದರ್ಶಿ ಅಮಾನತಿಗೆ ಪಟ್ಟು: ರಾಜ್ಯಪಾಲರಿಗೂ ದೂರು ನೀಡಿದ ಕೆಪಿಎಸ್ಸಿ ಅಧ್ಯಕ್ಷ?

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಕಾರ್ಯದರ್ಶಿ, ಆಯೋಗದ ನಿರ್ಣಯ ಮತ್ತು ಕಾನೂನು ಉಲ್ಲಂಘನೆ ಕುರಿತು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಅವರು, ಸಾಂವಿಧಾನಿಕ ಹುದ್ದೆಯಲ್ಲಿರುವ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುವ ಅಧಿಕಾರ ಸರಕಾರಿ ಅಧಿಕಾರಿಯಾಗಿರುವ ಕೆಪಿಎಸ್ಸಿ ಕಾರ್ಯದರ್ಶಿ ಲತಾಕುಮಾರಿ ಅವರಿಗೆ ಇಲ್ಲ. ಆ ರೀತಿ ಪತ್ರ ಬರೆದು ದುರ್ನಡತೆ ಮತ್ತು ಕರ್ತವ್ಯಲೋಪ ಎಸಗಿರುವ ಲತಾಕುಮಾರಿ ಸರಕಾರಕ್ಕೂ ಮುಜುಗರ ಉಂಟುಮಾಡಿರುತ್ತಾರೆ ಎನ್ನುವ ಅಂಶ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಮುಖ್ಯವಾಗಿ ಆಯೋಗದ ಅನುಮೋದನೆ ಇಲ್ಲದೆ ಕಾರ್ಯದರ್ಶಿಯವರು ಪರೀಕ್ಷಾ ದಿನಾಂಕ ನಿಗದಿ ಮಾಡಿದ್ದಾರೆ. ಪರೀಕ್ಷೆಯನ್ನು ನಡೆಸಿ, ಕೀ ಉತ್ತರಗಳನ್ನು ಪ್ರಕಟಿಸಿದ್ದಾರೆ. ಆಯೋಗದ ವೆಬ್‍ಸೈಟ್ ಅನ್ನು ವೈಯಕ್ತಿಕ ಸ್ವತ್ತು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಕಾರ್ಯಸೂಚಿಯ ಕುರಿತು ಮಾಹಿತಿ ನೀಡದೇ ಸಭೆ ಕರೆದಿದ್ದು, ಸಭೆ ಮುಂದೂಡುವಂತೆ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದಾರೆ. ಅಧ್ಯಕ್ಷರ ಗಮನಕ್ಕೆ ತರದೇ ಪರ್ಯಾಯ ಸಭೆ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದರು ಎಂದು ಹೇಳಲಾಗುತ್ತಿದೆ.
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ, ದಾಖಲೆ ಒದಗಿಸುವಂತೆ ಟಿಪ್ಪಣಿ ನೀಡಿದ್ದರೂ, ಅದನ್ನು ಪಾಲಿಸಿಲ್ಲ. ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಆಯೋಗದ ಹೆಸರಿನಲ್ಲಿ ಹೊಸ ಅಧಿಸೂಚನೆ ಹೊರಡಿಸಿರುವ ದಾಖಲೆ ಇದ್ದು, ಈ ಸಂಬಂಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.







