‘ವಕೀಲರ ವಿರುದ್ಧ ಎಫ್‍ಐಆರ್’; ಎಸ್‌ಐ ಅಮಾನತು ಕೋರಿ ಪ್ರತಿಪಕ್ಷಗಳ ಗದ್ದಲ
ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಧರಣಿ

ಬೆಂಗಳೂರು : ರಾಮನಗರದಲ್ಲಿ 40 ಮಂದಿ ವಕೀಲರ ವಿರುದ್ಧ ಎಫ್‍ಐಆರ್ ದಾಖಲಿಸಿರುವ ಐಜೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ತನ್ವೀರ್ ಹುಸೇನ್‍ರನ್ನು ಅಮಾನತುಗೊಳಿಸಬೇಕು ಹಾಗೂ ವಕೀಲ ಚಾಂದ್‍ಪಾಷಾ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮಂಗಳವಾರ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಮಂಗಳವಾರ ಶೂನ್ಯವೇಳೆಯಲ್ಲಿ ವಕೀಲರ ವಿರುದ್ಧ ದಾಖಲಿಸಿದ ಎಫ್‍ಐಆರ್ ಬಗ್ಗೆ ಉಲ್ಲೇಖಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಮನಗರ ಪ್ರಕ್ಷುಬ್ಧ ಆಗಿದೆ, ಪ್ರತಿಭಟನಾ ಸ್ಥಳಕ್ಕೆ ನಿನ್ನೆ ನಾನು, ಎಚ್.ಡಿ.ಕುಮಾರಸ್ವಾಮಿ ಹೋಗಿದ್ದೆವು. ಚಾಂದ್ ಪಾಷಾ ಎಂಬ ವಕೀಲ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶ ಮಾಡಿರುವ ಕುರಿತು ಫೇಸ್ಬುಕ್ ನಲ್ಲಿ ನ್ಯಾಯಾಧೀಶಕರಿಗೆ ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಹಿಂದೂಗಳು, ಬಿಜೆಪಿಯನ್ನು ನಿಂದಿಸಿದ್ದಾನೆ ಎಂದರು.
ಈ ಬಗ್ಗೆ ವಕೀಲರ ಸಂಘದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಾಂದ್ ಪಾಷಾ ಬೆಂಬಲಿಗರು ವಕೀಲರ ಸಂಘದ ಕಚೇರಿಗೆ ಬಂದು ವಕೀಲರನ್ನು ನಿಂದಿಸಿ, ಬೆದರಿಸಿದ್ದಾರೆ. ಈ ಬಗ್ಗೆಯೂ ವಕೀಲರು ಪೊಲೀಸರಿಗೆ ದೂರು ಎಸ್‌ಐ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ನಂತರ, ಚಾಂದ್ ಪಾಷಾ ಕಡೆಯವರಿಂದ ಮತ್ತೊಂದು ದೂರು ಪಡೆದುಕೊಂಡು ಪೊಲೀಸರು 40 ಜನ ವಕೀಲರ ವಿರುದ್ಧ ಎಫ್‍ಐಆರ್ ಹಾಕಿದ್ದಾರೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ. ವಿಧಾನಸೌಧ ಮುತ್ತಿಗೆ ಹಾಕುವ ಹೋರಾಟಕ್ಕೂ ಕರೆ ನೀಡಿದ್ದಾರೆ. ಇದನ್ನು ಸರಕಾರ ಲಘುವಾಗಿ ಪರಿಗಣಿಸಬಾರದು. ತಕ್ಷಣ ಆ ಎಸ್‌ಐ ನನ್ನು ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣದ ತನಿಖೆಗೆ ಚನ್ನಪಟ್ಟಣ ಡಿವೈಎಸ್‍ಪಿಯನ್ನು ನೇಮಿಸಲಾಗಿದೆ. ತನಿಖಾ ವರದಿಯಲ್ಲಿ ತಪ್ಪು ಕಂಡುಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಒಬ್ಬ ಅಧಿಕಾರಿಯನ್ನು ವಿನಾಕಾರಣ ಅಮಾನತು ಮಾಡಲು ಆಗುವುದಿಲ್ಲ ಎಂದರು.
ವಕೀಲರು ನೀಡಿದ ದೂರನ್ನು ಆಧರಿಸಿ ಚಾಂದ್ ಪಾಷಾ ವಿರುದ್ಧ ಐಪಿಸಿ ಸೆಕ್ಷನ್ 504, 505 ಅಡಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ. ಕಾನೂನು ರೀತಿ ಕರ್ತವ್ಯ ನಿರ್ವಹಿಸಿರುವ ಎಸ್‌ಐ ತನ್ವೀರ್ ಹುಸೇನ್ ಮಾಡಿರುವ ತಪ್ಪಾದರೂ ಏನಿದೆ? ಎಂದು ಪರಮೇಶ್ವರ್ ಪ್ರಶ್ನಿಸಿದರು.
ಒಟ್ಟು ಮೂರು ಎಫ್‍ಐಆರ್ ಆಗಿದೆ. ಎಸ್‌ಐ ಮಾಡುವ ಕೆಲಸ ಅವರು ಮಾಡಿದ್ದಾರೆ. ನಂತರ ಜಿಲ್ಲಾಧಿಕಾರಿ, ಎಸ್‌ಐ, ಎಡಿಜಿಪಿ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಆದರೂ, ವಕೀಲರು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ನಂತರ ಬೆಂಗಳೂರಿನಿಂದ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹೋಗಿ ಇನ್ನಷ್ಟು ಪ್ರಚೋದನೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಸಿಎಂ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಸಂಧಾನಕ್ಕೆ ಪ್ರಯತ್ನ ಪಟ್ಟರೂ ಆಗಿಲ್ಲ. ಒಂದು ಘಟನೆಯನ್ನು ಬೇರೆ ಬೇರೆ ರೀತಿ ಬಿಂಬಿಸಿದರೆ ಹೇಗೆ? ಇದು ಎಲ್ಲಿ ಹೋಗಿ ಮುಟ್ಟುತ್ತದೆ. ಸರಕಾರ ಇದರಲ್ಲಿ ಯಾರ ರಕ್ಷಣೆಯೂ ಮಾಡುತ್ತಿಲ್ಲ. ಬಾರ್ ಅಸೋಸಿಯೇಷನ್‍ನವರ ಜೊತೆ ನಾನೂ ಬೇಕಾದರೆ ಮಾತಾಡುತ್ತೇನೆ ಎಂದು ಅವರು ಹೇಳಿದರು. ಈ ವಿಚಾರದ ಕುರಿತು ಬಿಜೆಪಿ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಬಸವರಾಜ ಬೊಮ್ಮಾಯಿ ಮಾತನಾಡಿದರು.
ಆದರೆ, ಪರಮೇಶ್ವರ್ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ನಂತರ, ಸ್ಪೀಕರ್ ಯು.ಟಿ.ಖಾದರ್ ಸದನವನ್ನು 10 ನಿಮಿಷ ಮುಂದೂಡಿದರು. ಸದನ ಪುನಃ ಸೇರಿದಾಗ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಮಸ್ಯೆಯ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ನಾಳೆ ಬೆಳಗ್ಗೆ ಸದನ ಸೇರಿದಾಗ ಈ ಬಗ್ಗೆ ಹೇಳಿಕೆ ನೀಡುತ್ತೇನೆ ಎಂದರು. ಗೃಹ ಸಚಿವರ ಮಾತಿಗೆ ಸಹಮತ ವ್ಯಕ್ತಪಡಿಸಿ ಪ್ರತಿಪಕ್ಷಗಳು ಧರಣಿ ಹಿಂಪಡೆದವು.







