ಮಠಗಳಿಗೆ ನೀಡಿದ ಅನುದಾನದಲ್ಲೂ ಲಂಚ ಪಡೆದ ಆಪಾದನೆ ನೆನಪಿಲ್ಲವೇ?: ದಿನೇಶ್ ಗುಂಡೂರಾವ್
ದೇವಸ್ಥಾನ, ಮಠ ಮಾನ್ಯಗಳಿಗೆ ಕಡಿಮೆ ಅನುದಾನ ನೀಡಿದ್ದಾರೆ ಎಂದ ಆರ್.ಆಶೋಕ್ ಗೆ ತಿರುಗೇಟು ನೀಡಿದ ಸಚಿವ

ಬೆಂಗಳೂರು: ಮಠಗಳಿಗೆ ನೀಡಿದ ಅನುದಾನದಲ್ಲೂ ಲಂಚ ಪಡೆದರು ಎಂದು ಸ್ವಾಮಿಯೊಬ್ಬರೂ ನಿಮ್ಮ ಸರಕಾರದ ಮೇಲೆ ಆಪಾದನೆ ಮಾಡಿದ್ದು ನೆನಪಿಲ್ಲವೇ? ನಾವು ಹಿಂದೂ ವಿರೋಧಿಗಳಾಗಿದ್ದರೆ ನಮಗೆ ನೀಡಿದ ಶೇ.42ರಷ್ಟು ಮಂದಿಯೂ ಹಿಂದೂ ವಿರೋಧಿಗಳೇ? ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಗುರುವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ವೇಳೆ ಹಿಂದಿನ ಬಿಜೆಪಿ ಸರಕಾರವು ದೇವಸ್ಥಾನಗಳಿಗೆ ಮಠ ಮಾನ್ಯಗಳಿಗೆ 154.80 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಆದರೆ, ಹೆಸರಿನಲ್ಲಿ ಶಿವ(ಡಿ.ಕೆ.ಶಿವಕುಮಾರ್, ರಾಮ(ಸಿದ್ದರಾಮಯ್ಯ) ಎಂದು ಇರುವವರು ಕೇವಲ 30 ಕೋಟಿ ರೂ.ನೀಡಿದ್ದಾರೆ ಎಂದು ಟೀಕಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ದಿನೇಶ್ ಗುಂಡೂರಾವ್, ಪರಶುರಾಮನ ಪರಿಸ್ಥಿತಿ ಏನಾಗಿದೆ? ಅರ್ಧಕ್ಕೆ ನಿಲ್ಲಿಸಿದ್ದಾರೆ, ಭುಜ ಇಲ್ಲ, ತಲೆ ಇಲ್ಲ. ಏನು ಇಲ್ಲ. ಪರಶುರಾಮನನ್ನು ಅರ್ಧಕ್ಕೆ ನಿಲ್ಲಿಸಿರುವುದು ನಾಚಿಕೆಗೇಡಿನ ಸಂಗತಿ. ಯಾರು ಮಾಡಿದ್ದು, ಈ ರೀತಿ ಅವಮಾನ ಮಾಡಿದ್ದು? ಎಂದು ಪ್ರಶ್ನಿಸಿದರು.
ಆಗ ಎದ್ದು ನಿಂತ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ಸರಕಾರ ತನಿಖೆಗೆ ಆದೇಶ ಮಾಡಿದೆ. ನಾವು ತನಿಖೆಗೆ ಸಹಕಾರ ನೀಡುತ್ತೇವೆ. ಸದನದಲ್ಲಿ ಚರ್ಚೆ ಮಾಡುವುದಾದರೆ ಅದಕ್ಕೂ ಸಿದ್ಧ ಎಂದರು.
ನಂತರ ಮಾತು ಮುಂದುವರೆಸಿದ ದಿನೇಶ್ ಗುಂಡೂರಾವ್, ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಆದರೆ, ನಾವು ವೋಟಿಗಾಗಿ ಧರ್ಮವನ್ನು ಬಳಸಿಕೊಳ್ಳುವುದಿಲ್ಲ. ದೇವರು, ಧರ್ಮದ ಮೇಲೆ ನಮಗೂ ಬಹಳ ಭಕ್ತಿ ಇದೆ ಎಂದರು.
ಆರಾಧಾನ ಯೋಜನೆ ಆರಂಭವಾಗಿದ್ದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಸರಕಾರದಲ್ಲಿ. ಅದನ್ನು ನಾವು ವೋಟಿಗಾಗಿ ಮಾಡಿಲ್ಲ. ಅರ್ಚಕರಿಗೆ ಸಹಾಯ ಮಾಡಲು, ಅವರ ಬದುಕಿಗೆ ಭದ್ರತೆ ಕೊಡುವಂತಹ ದೊಡ್ಡ ಹೆಜ್ಜೆಯನ್ನು ರಾಮಲಿಂಗಾರೆಡ್ಡಿ ಇಟ್ಟಿದ್ದಾರೆ. ನೀವು ಅಧಿಕಾರದಲ್ಲಿ ಇದ್ದಾಗ ಯಾಕೆ ಅರ್ಚಕರ ಪರವಾಗಿ ಕ್ರಮ ಕೈಗೊಂಡಿಲ್ಲ. ಅರ್ಚಕರಿಗೆ ಬರುತ್ತಿದ್ದ ತಸ್ತಿಕ್ ಹಣ 24 ಸಾವಿರ ರೂ.ಗಳನ್ನು 36 ಸಾವಿರ ರೂ., ನಂತರ 48 ಸಾವಿರ ರೂ.ಗಳಿಗೆ ಎರಡು ಬಾರಿ ಏರಿಕೆ ಮಾಡಿದ್ದು ಸಿದ್ದರಾಮಯ್ಯ ಸರಕಾರ ಎಂದು ಅವರು ಹೇಳಿದರು.
ನೀವು ದಯವಿಟ್ಟು ಧರ್ಮಕ್ಕೂ ರಾಜಕೀಯ ತರಬೇಡಿ. ನಿಮ್ಮಷ್ಟು ಭಕ್ತಿ ನಮಗೂ ಇದೆ. ಆದರೆ ನೀವು ಧರ್ಮದಲ್ಲಿ ರಾಜಕೀಯ ತಂದು, ಸ್ವಾರ್ಥ ಸಾಧನೆ, ವೋಟು ಪಡೆಯಲು ಬಯಸುತ್ತೀರಾ. ನಾವು ನಮ್ಮ ಧರ್ಮವನ್ನು ರಾಜಕೀಯಕ್ಕೆ ತರುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.







