ಲೋಕಸಭಾ ಚುನಾವಣೆ | ಬಿಜೆಪಿ ಅಭ್ಯರ್ಥಿಗಳ ಘೋಷಣೆ ಬೆನ್ನಲ್ಲೆ ಹಲವೆಡೆ ಪ್ರತಿಭಟನೆ, ಆಕ್ರೋಶ
Photo : PTI
ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೆ ಹಲವೆಡೆ ಟಿಕೆಟ್ ವಂಚಿತರ ಬೆಂಬಲಿಗರು, ಪಕ್ಷ ಕಾರ್ಯಕರ್ತರು, ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೈ ತಪ್ಪಿದ್ದ ಬೆನ್ನಲ್ಲೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ಯಡಿಯೂರಪ್ಪಗೆ ಸೆಡ್ಡು ಹೊಡೆಯುವ ಸೂಚನೆ ನೀಡಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಟಿಕೆಟ್ ಕೈ ತಪ್ಪಿರುವುದರಿಂದ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದೇಶ್ವರ್ ಅವರ ಪತ್ನಿಗೆ ಘೋಷಿಸಿರುವ ಟಿಕೆಟ್ ಅನ್ನು ರದ್ದುಗೊಳಿಸಿ ತಮಗೆ ಅವಕಾಶ ಮಾಡಿಕೊಡಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣಗೆ ಟಿಕೆಟ್ ಕೈತಪ್ಪಿರುವುದರಿಂದ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ, ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಡಾ.ಕೆ. ಬಸವರಾಜ ಜೊತೆಯೂ ಮಾತಿನ ಚಕಮಕಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವು ಧಿಕ್ಕಾರಗಳನ್ನು ಕೂಗಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಕಡೆಗಣಿಸಿ, ವಿ.ಸೋಮಣ್ಣಗೆ ಟಿಕೆಟ್ ನೀಡಿರುವುದು ತುಮಕೂರು ಜಿಲ್ಲಾ ಬಿಜೆಪಿ ವಲಯದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಸೋಮಣ್ಣ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದ ಆರಂಭದಲ್ಲೆ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು.
ಯಾವುದೆ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದು ಮಾಧುಸ್ವಾಮಿ ಒತ್ತಾಯಿಸಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ವಿರೋಧದ ನಡುವೆಯೂ ಸೋಮಣ್ಣಗೆ ಮಣೆ ಹಾಕಿದೆ. ಇದರಿಂದ ಬೇಸತ್ತಿರುವ ಮಾಧುಸ್ವಾಮಿ ಚುನಾವಣೆಯ ಪ್ರಚಾರ ಕಾರ್ಯದಿಂದ ಹಿಂದಕ್ಕೆ ಸರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಬದಲು ರಾಜವಂಶಸ್ಥ ಯಧುವೀರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಲ್ಲಿಯೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಬೇಕೆಂಬ ಅಭಿಲಾಷೆ ಹೊಂದಿದ್ದ ಸಂಸದೆ ಸುಮಲತಾ ಅಂಬರೀಶ್ಗೆ ಬಿಜೆಪಿ ಹೈಕಮಾಂಡ್ ಕೈ ಕೊಟ್ಟಿದ್ದು ಅವರು ಅಡ್ಡಕತ್ತರಿಯಲ್ಲಿ ಸಿಲುಕಿ ಕೊಂಡಂತಾಗಿದೆ.
ಈಗಾಗಲೆ, ಕಾಂಗ್ರೆಸ್ ಪಕ್ಷ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಮೈತ್ರಿ ಮಾತುಕತೆಯಂತೆ ಬಿಜೆಪಿಯು ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಸುಮಲತಾ ಅತ್ತ ಬಿಜೆಪಿಯಲ್ಲೂ ಇರದೆ, ಕಾಂಗ್ರೆಸ್ಗೂ ಬರದಂತಹ ಪರಿಸ್ಥಿತಿ ಸೃಷ್ಟಿಸಿಕೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿಯೇ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಕೈ ತಪ್ಪಿ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅವರು ಸೋಲು ಅನುಭವಿಸಿದರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ನಂತರ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಪುನಃ ಬಿಜೆಪಿ ಸೇರಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಜಗದೀಶ್ ಶೆಟ್ಟರ್ ಮೊದಲ ಪಟ್ಟಿಯಲ್ಲೆ ತಮ್ಮ ಹೆಸರು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಬೆಳಗಾವಿಗೆ ಅಭ್ಯರ್ಥಿ ಘೋಷಣೆ ಮಾಡದೆ ಇರುವುದು ಜಗದೀಶ್ ಶೆಟ್ಟರ್ ಅಸಮಾಧಾನಕ್ಕೆ ಕಾರಣವಾಗಿದೆ.