ಮಾಧ್ಯಮ ಪ್ರತಿನಿಧಿಗಳಿಗೆ ‘ಅಂಚೆ ಮತದಾನ’ ಸೌಲಭ್ಯ
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಯಾವ ಮತದಾರರೂ ಮತದಾನದಿಂದ ವಂಚಿತರಾಗದಿರುವಂತೆ ಹಲವು ಕ್ರಮಗಳನ್ನು ವಹಿಸಿದ್ದು, ಅಗತ್ಯ ಸೇವೆಯಡಿ ಗೈರು ಹಾಜರಾಗುವ ಮಾಧ್ಯಮ ಪ್ರತಿನಿಧಿಗಳಿಗೆ ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ಮತದಾನದ ದಿನದಂದು ತಮ್ಮ ಮತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗದೇ ಕರ್ತವ್ಯದಲ್ಲಿ ನಿಯೋಜಿತರಾದ ಆಯೋಗ ಅನುಮೋದಿತ ಮಾಧ್ಯಮದವರು ಮತದಾನದ ದಿನಕ್ಕೆ ಮುಂಚಿತವಾಗಿ ತಮ್ಮ ಮತ ಕ್ಷೇತ್ರದಲ್ಲಿ ಗೈರು ಹಾಜರಿ ಮತದಾರ ಹೆಸರಿನಲ್ಲಿ ಅಂಚೆ ಮತದಾನ ಮಾಡಲು ಅವಕಾಶವಿದ್ದು, ಇದನ್ನು ನಮೂನೆ 12-ಡಿ ಭರ್ತಿ ಮಾಡುವ ಮೂಲಕ ಮತ ಚಲಾಯಿಸಬಹುದು.
ಮಾ.19ರಿಂದ ಮಾ.21ರೊಳಗೆ ಕೇಂದ್ರ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ ಅವರಿಂದ ಕಚೇರಿ ಅವಧಿಯಲ್ಲಿ ನಮೂನೆ 12-ಡಿ ಅನ್ನು ಪಡೆದು, ಭರ್ತಿ ಮಾಡಿದ ನಮೂನೆಯನ್ನು ಮಾ. 21ರ ಸಂಜೆ 5.30ರ ಒಳಗಾಗಿ ಸಲ್ಲಿಸಲು ತಿಳಿಸಿದೆ.
ಸಂಬಂಧಿಸಿದ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಅಡಕವಿರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಯೂ ಆಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ, ಅವರ ಮೊಬೈಲ್ ಸಂಖ್ಯೆ-94808 41250ಗೆ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ಕೋರಿದೆ.