ಜೆಡಿಎಸ್ನಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳಿಗೆ ಬೆಲೆ ಇಲ್ಲ: ಮರಿತಿಬ್ಬೇಗೌಡ
ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಪಕ್ಷದ ಕಾರ್ಯಕರ್ತರ, ಮುಖಂಡರ ಅಭಿಪ್ರಾಯಗಳಿಗೆ ಯಾವುದೇ ಬೆಲೆಯಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ದೂರಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ಜಾತ್ಯತೀತ ತತ್ವಗಳನ್ನು ಜೆಡಿಎಸ್ ಗಾಳಿಗೆ ತೂರಿದ ಕಾರಣ ನನ್ನ ಕ್ಷೇತ್ರದ ಶಿಕ್ಷಕರ ಅಭಿಪ್ರಾಯ ಕೇಳಿ ಕಾಂಗ್ರೆಸ್ಗೆ ಸೇರುವ ತೀರ್ಮಾನ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾವೇರಿ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ. ರೈತರ ಹೆಸರೇಳಿಕೊಂಡು ಜನತಾದಳ ಕೇವಲ ರಾಜಕಾರಣ ಮಾಡಿದೆ. ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಶೂನ್ಯ. ಚೆಲುವರಾಯಸ್ವಾಮಿ ಅವರು ಆರೋಗ್ಯ ಸಚಿವರಾಗಿದ್ದಾಗ ಮೆಡಿಕಲ್ ಕಾಲೇಜು ತಂದರು ಎಂದು ಮರಿತಿಬ್ಬೇಗೌಡ ತಿಳಿಸಿದರು.
ಜನತಾದಳದವರು ನನಗೆ ಟಿಕೆಟ್ ಮಾತ್ರ ನೀಡಿದರು ಆದರೆ, ಬೆಂಬಲ ಮಾತ್ರ ನೀಡಲಿಲ್ಲ. ಕೇವಲ ಕುಟುಂಬದ ಪರವಾಗಿ ಮಾತ್ರ ಪಕ್ಷದ ಸಭೆಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ನಾನು ಅನೇಕ ಬಾರಿ ಇದರ ವಿರುದ್ಧ ದನಿ ಎತ್ತಿದ್ದೇನೆ. ರೈತ ವಿರೋಧಿ ಕಾಯ್ದೆಗಳನ್ನು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದಾಗ ನಾನು ವಿರೋಧ ವ್ಯಕ್ತಪಡಿಸಿದ್ದೆ ಎಂದು ಮರಿತಿಬ್ಬೇಗೌಡ ಹೇಳಿದರು.
ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದೆ. ಮೊದಲನೇ ಬಾರಿಗೆ ಡಿ.ಕೆ.ಶಿವಕುಮಾರ್ ಅವರ ಆಶೀರ್ವಾದದಿಂದ ಟಿಕೆಟ್ ದೊರೆಯಿತು. 1985ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನತಾದಳಕ್ಕೆ ಸೇರಿದ್ದೆ. ಇಂದು ಜಾತ್ಯತೀತ ತತ್ವಗಳಿಗೆ ಧಕ್ಕೆ ಆಗಿರುವ ಕಾರಣ ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗೆ ಸಂಪೂರ್ಣವಾಗಿ ಬೆಂಬಲ ನೀಡಲಿದ್ದೇವೆ ಎಂದು ಮರಿತಿಬ್ಬೇಗೌಡ ತಿಳಿಸಿದರು.
ಸಚಿವ ಚೆಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ(ಸ್ಟಾರ್ ಚಂದ್ರು), ಶಾಸಕರಾದ ಉದಯ್, ರವಿಗಣಿಗ ಸೇರಿ ಹಲವರು ಉಪಸ್ಥಿತರಿದ್ದರು.
ಮರಿತಿಬ್ಬೇಗೌಡ, ಅಪ್ಪಾಜಿಗೌಡ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆ: ‘ನಗರದ ಕ್ವೀನ್ಸ್ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ಮಾಜಿ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಯೋಗೇಶ್, ಮಂಜುನಾಥ್ ಗೌಡ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಆಶಾ ಸುರೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.