ಐಟಿ, ಈಡಿ, ಸಿಬಿಐ ಕೇಂದ್ರ ಸರಕಾರದ ಕೈಗೊಂಬೆಗಳು: ಎಚ್.ಎಸ್.ಮಂಜುನಾಥಗೌಡ
ಬೆಂಗಳೂರು: ಜಾರಿ ನಿರ್ದೇಶನಾಲಯ, ಅದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಅನ್ನು ಕೇಂದ್ರದ ಬಿಜೆಪಿ ಸರಕಾರ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ವಿರೋಧ ಪಕ್ಷಗಳನ್ನು ಮಟ್ಟಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ಆರೋಪಿಸಿದ್ದಾರೆ.
ಶುಕ್ರವಾರ ಇಲ್ಲಿನ ಆನಂದರಾವ್ ವೃತ್ತದಲ್ಲಿ ನ ಕಾಂಗ್ರೆಸ್ ಕಚೇರಿ ಬಳಿ ಏರ್ಪಡಿಸಿದ್ದ ಪ್ರತಿಭಟನೆ ಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ. ಇಡಿ ಮತ್ತು ಐ.ಟಿ ಇಲಾಖೆ ದುರ್ಬಳಕೆ ಮಾಡಿಕೊಂಡು ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ ಎಂದು ದೂರಿದರು.
ಈ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಸಂಜಯ್ ರಾವತ್, ತೆಲಂಗಾಣದ ಬಿಆರ್ ಎಸ್ ಪಕ್ಷದ ಕವಿತಾ ಅವರನ್ನು ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದರು. ಪ್ರಧಾನಿ ಮೋದಿ 400 ಲೋಕಸಭಾ ಸ್ಥಾನ ಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಅದರೆ ವಿರೋಧ ಪಕ್ಷದ ಪ್ರಬಲ ನಾಯಕರಿಗೆ ಬಿಜೆಪಿ ಸೇರಿ ಎಂದು ಒತ್ತಡ ಹಾಕುತ್ತಾರೆ ಎಂದರು.
ಪಕ್ಷಕ್ಕೆ ಸೇರದೆ ಹೋದರೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕುತ್ತಾರೆ. ಕೇಂದ್ರ ಅದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಮತ್ತು ಸಿ.ಬಿ.ಐ.ಕೇಂದ್ರ ಬಿಜೆಪಿ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ದೇಶದ ಜನರು ಪ್ರಜ್ಞಾವಂತರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕಾದರೆ ಇಂಡಿಯಾ ಮೈತ್ರಿಕೂಟ ಬೆಂಬಲಿಸಿ ಎಂದು ಮಂಜುನಾಥ್ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವ ಕಾಂಗ್ರೆಸ್ ಪಕ್ಷ ನೂರಾರು ಕಾರ್ಯಕರ್ತರು ಪ್ರಧಾನಿ ಮೋದಿ, ಕೇಂದ್ರದ ಬಿಜೆಪಿ ಸರಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.