ಬಿಜೆಪಿ ಜೊತೆ ಸಂಬಂಧ ಬೆಳೆದ ಕೂಡಲೇ ಮಹಿಳೆಯರ ನಡತೆ ಬಗ್ಗೆ ಮಾತನಾಡುವಷ್ಟು ಉದ್ಧಟತನ ಬಂದಿತೇ? : ಎಚ್ಡಿಕೆ ವಿರುದ್ಧ ಸುರ್ಜೇವಾಲಾ ಆಕ್ರೋಶ
Photo : PTI
ಬೆಂಗಳೂರು: ‘ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಎಚ್.ಡಿ.ಕುಮಾರಸ್ವಾಮಿ ಹಳ್ಳಿಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂಬ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಗೌರವಿಸದ ಬಿಜೆಪಿ ಜೊತೆ ಸಂಬಂಧ ಬೆಳೆದ ಕೂಡಲೇ ಮಹಿಳೆಯರ ನಡತೆ ಬಗ್ಗೆ ಮಾತಾಡುವಷ್ಟು ಉದ್ಧಟತನ ಬಂದಿತೇ ಕುಮಾರಸ್ವಾಮಿಯವರೇ?’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ರವಿವಾರ ಎಕ್ಸ್ (ಟ್ವಿಟ್ಟರ್)ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಈ ಹಿಂದೆ ಸುಮಲತಾ ಅವರನ್ನು ಎಲ್ಲಿ ಮಲಗಿದ್ದೆ ಎಂದು ಕೇಳಿದ್ದಿರಿ, ಈಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ರಾಜ್ಯದ ಮಹಿಳೆಯರ ನಡತೆಗೆ ಕಪ್ಪು ಚುಕ್ಕೆ ತರುವಂಥ ಮಾತಾಡಿದ್ದೀರಿ ಇದು ನಿಜವಾಗಿಯೂ ಅಕ್ಷಮ್ಯ. ಮದ್ಯದ ಬೆಲೆಯ ಬಗ್ಗೆ ಮಾತಾಡಿ ಪುರುಷರನ್ನು ದಾರಿ ತಪ್ಪಿಸುವ ಮನೆ ಒಡೆಯುವ ಕೆಲಸ ಮಾಡಿದ್ದಾಯಿತು. ಈಗ ಗೃಹಲಕ್ಷ್ಮಿಯರ ಬಗ್ಗೆ ಮಾತಾಡಿ ಜನರ ದಿಕ್ಕು ತಪ್ಪಿಸುತ್ತಿದ್ದೀರ?’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನಿಜವಾಗಿಯೂ ದಾರಿ ತಪ್ಪಿದವರು ನೀವೇ ಹೊರತು ಮಹಿಳೆಯರಲ್ಲ. ಮಿಸ್ಟರ್ ಕುಮಾರಸ್ವಾಮಿಯವರೇ. ಎಚ್.ಡಿ.ದೇವೇಗೌಡ ಅವರೇ ಹೆಣ್ಣುಮಕ್ಕಳನ್ನು ಅವಮಾನಿಸುವಂಥ ಮಾತುಗಳನ್ನಾಡಿದ ನಿಮ್ಮ ಮಗನ ಕೀಳು ಮಟ್ಟದ ಹೇಳಿಕೆಗೆ ನಿಮ್ಮ ಸಹಮತವಿದೆಯೇ?. ಕುಮಾರಸ್ವಾಮಿಯವರೇ ನಿಮ್ಮ ತಂದೆ ಈ ದೇಶದ ಪ್ರಧಾನಿಯಾಗಿದ್ದವರು ಅವರಾದರೂ ನಿಮ್ಮ ಈ ನೀಚ ಮನಸ್ಥಿತಿಯ ಮಾತನ್ನು ಒಪ್ಪುವರೇ?’ ಎಂದು ಕೇಳಿದ್ದಾರೆ.
‘ರಾಜ್ಯ ಪ್ರವಾಸದಲ್ಲಿರುವ ಮೋದಿಯವರೇ ಕುಮಾರಸ್ವಾಮಿ ಮಹಿಳೆಯರ ಬಗೆಗಿನ ಅವಹೇಳನಕಾರಿ ಹೇಳಿಕೆ ಬಗ್ಗೆ ಏನು ಹೇಳುವಿರಿ? ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೀರ?, ಇಲ್ಲ ಎಂದಾದರೆ ಬಿಜೆಪಿಯ ಜೊತೆಗಿನ ಜೆಡಿಎಸ್ ಮೈತ್ರಿಯನ್ನು ಕಡಿದುಕೊಳ್ಳುತ್ತೀರ?. ಉತ್ತರಿಸಿ ಮೋದಿಯವರೇ, ಹಾಗಿದ್ದರೆ ನಿಮ್ಮ ಭೇಟಿ ಬಚಾವೋ ಭೇಟಿ ಪಡಾವೋ ಕೇವಲ ಬೂಟಾಟಿಕೆಯ ಘೋಷಣೆ ಅಷ್ಟೇನಾ?. ಮಹಿಳಾ ಸಬಲೀಕರಣವನ್ನು ಸಹಿಸಲಾಗದ ನಿಮ್ಮ ಮಹಿಳಾ ವಿರೋಧಿ ಮನಸ್ಥಿತಿಗೆ ಧಿಕ್ಕಾರವಿರಲಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.