ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ : ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ
ನಟ ಕಿಶೋರ್ ಕುಮಾರ್
ಬೆಂಗಳೂರು : ಬಹುಭಾಷಾ ನಟ ಕಿಶೋರ್ ಕುಮಾರ್ ತಮ್ಮ ನಟನೆಯಿಂದ ಅಷ್ಟೇ ಅಲ್ಲದೆ, ಸಾಮಾಜಿಕ, ರಾಜಕೀಯ ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಪ್ರಧಾನಿಯ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ಬಹುಭಾಷಾ ನಟ ಕಿಶೋರ್ ಕುಮಾರ್, ಪ್ರಧಾನಿ ಮೋದಿಯ ಸಮಾವೇಶ ಹಾಗೂ ಸಂದರ್ಶನದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದು, “ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ” ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ನಟ ಕಿಶೋರ್, “ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ” ಎಂದು ಪ್ರಧಾನಿ ಮೋದಿ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
ಕಿಶೋರ್ ಕುಮಾರ್ ಪೋಸ್ಟ್ನಲ್ಲಿ ಏನಿದೆ?
'ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ . ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವ ಕಂಡ ಅತೀ ಸುಳ್ಳುಗಾರ, ಅತೀ ಪುಕ್ಕಲು, ಅತೀ ನಿಕೃಷ್ಠ, ಅತೀ ದುರಹಂಕಾರಿ, ಅತೀ ಕ್ರೂರ, ಅತೀ ಮೂರ್ಖ, ಅತೀ ಸಂವೇದನಾಹೀನ, ಅತೀ ಘನತೆಹೀನ, ಅತೀ ಆತ್ಮರತಿಲೋಲ, ಅತೀ ಜನವಿರೋಧಿ, ಅತೀ ಹೊಲಸು ನಾಲಿಗೆಯ, ಅತೀ ಸಂಕುಚಿತ ದೃಷ್ಟಿಯ ಅತೀ ಅಪಾಯಕಾರಿ ' ಎಂದು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
ಅತೀ ಭ್ರಷ್ಟ ನಿರಂಕುಶ ಪ್ರಭುತ್ವವಾದಿ ಎಂದು ಆಧಾರಸಹಿತ ಆ ಮನುಷ್ಯನೇ (?) ಹೇಳಿಬಿಡುತ್ತಾನೆ ಬೇಕಿದ್ದರೆ ಅವನ ನಡೆ ನುಡಿಯನ್ನು ನೋಡಿ. 10 ವರ್ಷ ಅಧಿಕಾರವಿದ್ದೂ ಮಾಡಿದ ಕೆಲಸದ ಬಗ್ಗೆ, ರೈತರ, ಸೈನಿಕರ, ಮಹಿಳೆಯರ, ಮಕ್ಕಳ, ಆಸ್ಪತ್ರೆ ಕಾಲೇಜುಗಳ ಅಭಿವೃದ್ಧಿಯ ಬಗ್ಗೆ ಮಾತಾಡಲು ಯೋಗ್ಯತೆಯಿಲ್ಲದೇ.. ಬರೀ ಸುಳ್ಳು, ದ್ವೇಷ ಕಾರುವುದು.. ಮುಸ್ಲಿಂ ತೆರಿಗೆಯಂತೆ , ನುಸುಳುಕೋರರಂತೆ, ಪಾಕೀಸ್ಥಾನವಂತೆ, ರೂಮು ಕಿತ್ಕೊತಾರಂತೆ, ಎಮ್ಮೆ ಕಿತ್ಕೊತಾರಂತೆ, ಸೈಕಲ್ ಕಿತ್ಕೊತಾರಂತೆ, ವೋಟು ಜಿಹಾದ್ ಅಂತೆ ಮಂದಿರಕ್ಕೆ ಬೀಗವಂತೆ … ಬರೀ ತಲೆಬುಡವಿಲ್ಲದ ಮಾತುಗಳು, ಮುಸ್ಲಿಂ ಭಯೋತ್ಪಾದಕರು ಇಸ್ಲಾಂನ ಮಾನ ಕಳೆದಂತೆ ಅಧಿಕಾರಕ್ಕಾಗಿ ಹಿಂದೂ ಬಣ್ಣ ಬಳಿದುಕೊಂಡ ಈ ಢೋಂಗಿ ಮನುಷ್ಯ ಹಿಂದೂ ಧರ್ಮದ ಮಾನ ವಿಶ್ವದಾದ್ಯಂತ ಮೂರು ಕಾಸಿಗೆ ಹರಾಜು ಹಾಕಿಬಿಟ್ಟ..' ಎಂದು ಕಿಶೋರ್ ಕಿಡಿಕಾರಿದ್ದಾರೆ.