ಫಾರ್ಮ್ ಹೌಸ್ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ | ಯಾವುದೇ ಜನಪ್ರತಿನಿಧಿಗಳು ಭಾಗಿಯಾಗಿರಲಿಲ್ಲ : ಪೊಲೀಸ್ ಆಯುಕ್ತರ ಸ್ಪಷ್ಟನೆ
ಬೆಂಗಳೂರು : ನಗರದ ಹೊರವಲಯದ ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣವನ್ನು ಹೆಬ್ಬಗೋಡಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಪಾರ್ಟಿಯಲ್ಲಿ ತೆಲುಗಿನ ಪೋಷಕ ನಟಿ ಸೇರಿದಂತೆ 101 ಮಂದಿ ಭಾಗಿಯಾಗಿದ್ದರು. ಇದರಲ್ಲಿ ಯಾವುದೇ ಜನಪ್ರತಿನಿಧಿಗಳು ಇರಲಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಮೇ 19ರ ರಾತ್ರಿ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ಹೌಸ್ವೊಂದರಲ್ಲಿ ‘ಸನ್ಸೆಟ್ ಟು ಸನ್ರೈಸ್ ವಿಕ್ಟರಿ ಈವೆಂಟ್’ನಲ್ಲಿ ಹೊರ ರಾಜ್ಯದವರು ಸೇರಿದಂತೆ ಕೆಲ ಸ್ಥಳೀಯರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು ಎಂದರು.
ಸಿಸಿಬಿ ಪೊಲೀಸರ ದಾಳಿ ವೇಳೆ ಮಾದಕ ಪದಾರ್ಥಗಳು ಪತ್ತೆಯಾಗಿವೆ. ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಘಟನಾ ಸ್ಥಳವು ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಕಾರ್ಯಚರಣೆಯಲ್ಲಿ ಶ್ವಾನದಳ ಬಳಕೆ ಮಾಡಿರುವುದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಲ್ಲಿದ್ದ ಕೆಲವರು ಮಾದಕವಸ್ತುಗಳನ್ನು ಕಾರು ಮತ್ತು ವಿವಿಧೆಡೆ ಬಚ್ಚಿಡಲಾಗಿದ್ದ ಮಾದಕ ವಸ್ತುಗಳನ್ನು ಶ್ವಾನದಳ ಪತ್ತೆ ಹಚ್ಚಿದೆ. 2023ರಲ್ಲಿ ಶ್ವಾನದಳಕ್ಕೆ ಮಾದಕವಸ್ತು ಪತ್ತೆಗೆ ವಿಶೇಷ ತರಬೇತಿ ನೀಡಲಾಗಿತ್ತು. ಆ ಶ್ವಾನಗಳನ್ನು ಮೊದಲ ಬಾರಿ ಈ ಕಾರ್ಯಚರಣೆಗೆ ಬಳಸಿ ಯಶಸ್ವಿಯಾಗಿದ್ದೇವೆಂದು ಬಿ.ದಯಾನಂದ್ ಹೇಳಿದರು.
ಪಾರ್ಟಿಯಲ್ಲಿದ್ದ 101 ಮಂದಿ ರಕ್ತ ಪರೀಕ್ಷೆ: ‘ದಾಳಿ ಸಂದರ್ಭದಲ್ಲಿ ಪೋಷಕ ನಟಿಯೊಬ್ಬರು ವಿಡಿಯೋ ಮಾಡಿರುವುದರ ಕುರಿತಾಗಿ ಅವರು ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆಂಬುದು ಗೊತ್ತಿಲ್ಲ, ಆ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಅಲ್ಲದೆ, ಪಾರ್ಟಿಯಲ್ಲಿ ಭಾಗಿಯಾಗಿದ್ದ 101 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಜಿ.ಆರ್.ಫಾರ್ಮ್ಹೌಸ್ ಮಾಲಕರ ಸ್ಪಷ್ಟನೆ: ‘ರೇವ್ ಪಾರ್ಟಿ ಪ್ರಕರಣ ಸಂಬಂಧ ಜಿ.ಆರ್. ಫಾರ್ಮ್ಹೌಸ್ನಲ್ಲಿ ಮಾಲಕರು ಸ್ಪಷ್ಟನೆ ನೀಡಿದ್ದು, ‘ಮೇ 19ರ ರಾತ್ರಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ಆದ ಎಂ/ಎಸ್ ವಿಕ್ಟರಿಗೆ ಜಿ.ಆರ್.ಫಾರ್ಮ್ಹೌಸ್ ಅನ್ನು ಬಾಡಿಗೆಗೆ ನೀಡಲಾಗಿತ್ತು. ಫಾರ್ಮ್ಹೌಸ್ನಲ್ಲಿ ನಡೆದ ಈವೆಂಟ್ ಅನ್ನು ಸಂಘಟಿಸುವಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಫಾರ್ಮ್ಹೌಸ್ ಮಾಲಕ ಗೋಪಾಲ್ ರೆಡ್ಡಿ ಭಾಗಿಯಾಗಿಲ್ಲ. ಈ ದುರಾದೃಷ್ಟಕರ ಘಟನೆಯಲ್ಲಿ ಫಾರ್ಮ್ಹೌಸ್ಗೆ ಸಂಬಂಧಿಸಿದ ಯಾವುದೇ ಸದಸ್ಯರು ಭಾಗಿಯಾಗಿಲ್ಲ ಮತ್ತು ಅಂತಹ ಸಮಾಜ ವಿರೋಧಿ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.