ಬೆಂಗಳೂರು | ಫೆಲೆಸ್ತೀನ್ ಪರ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದವರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ಗಾಝಾದಲ್ಲಿನ ಪರಿಸ್ಥಿತಿ ಕುರಿತು ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಮಹಿಳೆಯರು ಸೇರಿದಂತೆ 14 ಮಂದಿಯನ್ನು ಪುಲಕೇಶಿನಗರ ಪೊಲೀಸರು ರವಿವಾರದಂದು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ವಿಲಿನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜನರೊಂದಿಗೆ ಮಾತನಾಡಲು ಮತ್ತು ಪ್ಯಾಲೆಸ್ತೀನ್ನಲ್ಲಿನ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ರವಿವಾರ ಸಂಜೆ 4.45ರ ಸುಮಾರಿಗೆ ಫ್ರೇಜರ್ ಟೌನ್ನ ಕ್ಯಾರಿ ಫ್ರೆಶ್ ಸೂಪರ್ಮಾರ್ಕೆಟ್ ಬಳಿ 25-30 ಜನರು ಜಮಾಯಿಸಿದ್ದೆವು. ಆದರೆ ಯಾವುದೇ ಗಲಭೆ ನಡೆಯದಿದ್ದರೂ ಪೊಲೀಸರು ನಮ್ಮನ್ನು ಹಿಡಿದು ಬಂಧಿಸಿದರು ಎಂದರು.
ನಮ್ಮ ಜೊತೆಯಿದ್ದ ಅರಿಂದಮ್ ಎಂಬ ಟ್ರೇಡ್ ಯೂನಿಯನ್ ಕಾರ್ಯಕರ್ತನ ಮೇಲೆ ಪೊಲೀಸ್ ವ್ಯಾನ್ನೊಳಗೆ ಹಲ್ಲೆ ಮಾಡಲಾಗಿದೆ. ಅವನ ತಲೆ ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಹೊಡೆಯುತ್ತಲೇ ಇದ್ದರು. ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ 15 ಜನರನ್ನು ಪೊಲೀಸರು ಬಂಧಿಸಿದ್ದರು. ಪುರುಷ ಪೊಲೀಸ್ ಸಿಬ್ಬಂದಿ ನಾಲ್ವರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಅಕ್ವಿಲಿನ್ ಹೇಳಿದ್ದಾರೆ.