ಪೂರ್ವ ಪ್ರಾಥಮಿಕ ಶಿಕ್ಷಣದ ಅಗತ್ಯತೆಗಳ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿ : ಕೆ.ಎಸ್.ವಿಮಲಾ

ಬೆಂಗಳೂರು : ಪೂರ್ವ ಪ್ರಾಥಮಿಕ ಶಿಕ್ಷಣದ ಅಗತ್ಯತೆಗಳು ಮತ್ತು ಅದರ ಪರಿಣಾಮಗಳ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ‘ಐಸಿಡಿಎಸ್ ಉಳಿಸಿ-ಮಕ್ಕಳನ್ನು ರಕ್ಷಿಸಿ’ ಸಂಘಟನೆಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಪರಸ್ಪರ ಚರ್ಚಿಸದೆ, ಶಿಕ್ಷಣ ಇಲಾಖೆ ಏಕಮುಖವಾಗಿ ತಂದಿರುವ ಆದೇಶಗಳನ್ನು ತಡೆಹಿಡಿಯಬೇಕು. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡು ರಾಜ್ಯದ ಎಲ್ಲಿಯೂ ಜಾರಿಯಾಗಬಾರದು ಎಂದು ಕೋರಿದರು.
ಶಿಕ್ಷಣ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ 4 ರಿಂದ 6 ವರ್ಷದ ಮಕ್ಕಳಿಗೆ ಎಲ್‍ಕೆಜಿ-ಯುಕೆಜಿ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ನೀಡಲು ಸುತ್ತೋಲೆ ಹೊರಡಿಸಿದೆ. ಇದುವರೆಗೂ ರಾಜ್ಯದಲ್ಲಿ 2,524 ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸರಕಾರದ ಐಸಿಡಿಎಸ್ ಯೋಜನೆಯಿಂದ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲಾ ಪೂರ್ವ ಶಿಕ್ಷಣ ಕುರಿತ ಇಸಿಸಿಇ ಅಂಶಗಳ ಜಾರಿಗೆ ತೀವ್ರ ಧಕ್ಕೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಯಾವುದೆ ಮಗುವಿನ ಶೇ.40 ದೈಹಿಕ ಬೆಳವಣಿಗೆ ಶೇ.85 ಮಾನಸಿಕ ಬೆಳವಣಿಗೆಯಾಗುವ ಸಂದರ್ಭದಲ್ಲಿ ಲಾಲನೆ-ಪಾಲನೆ, ಪೋಷಣೆ ಮತ್ತು ಶಿಕ್ಷಣ ಕೊಡುವ ಸಲುವಾಗಿಯೆ 1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ಅಂಗನವಾಡಿ ಕೇಂದ್ರದ ಪರಿಕಲ್ಪನೆ ಬಂದಿದ್ದು. ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ 3-4 ವರ್ಷದ ಮಕ್ಕಳು ಮಾತ್ರವೆ ಉಳಿಯುತ್ತವೆ. ಆಗ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ವಿಮಲಾ ಆತಂಕ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರದ ಹೆಸರು ‘ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ’ ಎಂದು ಪರಿವರ್ತಿಸಬೇಕು. ನಿರಂತರ ಕೌಶಲ್ಯಭರಿತ ತರಬೇತಿಗಳನ್ನು ಕೊಡುವುದು. ಸರಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಷೂಗಳನ್ನು ನೀಡುವುದು. ಅಂಗನವಾಡಿ ಕಾರ್ಯಕರ್ತರನ್ನು ಶಿಕ್ಷಕಿ ಎಂದು ಹೆಸರಿಸಿ ಪದನಾಮ ಬದಲಿಸಬೇಕು. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡಬೇಕು ಎಂದು ವಿಮಲ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ, ಶಿಕ್ಷಣ ತಜ್ಞ ಎಸ್.ಆರ್.ಶಶಾಂಕ್, ಅಂಗನವಾಡಿ ನೌಕರರ ಸಂಘಟನೆ ಪದಾಧಿಕಾರಿ ಯಮುನಾ ಗಾಂವ್ಕರ್, ಅಂಗನವಾಡಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಉಪಸ್ಥಿತರಿದ್ದರು.







